ಕಾರ್ಯಕ್ರಮ

ಕುಶಾಲನಗರದ ಶ್ರೀ ಯೋಗಿ ನಾರೇಯಣ ಬಲಿಜ ಸಂಘದಿಂದ ಶ್ರೀ ಕೈವಾರ ತಾತಯ್ಯ ಜಯಂತಿ‌‌ ಆಚರಣೆ

ಕುಶಾಲನಗರ, ಮಾ 07: ಕುಶಾಲನಗರದ ಶ್ರೀ ಯೋಗಿ ನಾರೇಯಣ ಬಲಿಜ ಸಂಘದಿಂದ ಶ್ರೀ ಕೈವಾರ ತಾತಯ್ಯ ಜಯಂತಿ‌‌ ಆಚರಣೆ ನಡೆಯಿತು.
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ‌ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಆರ್.ಬಾಬು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜವನ್ನು ಸದೃಢವಾಗಿ‌ ಕಟ್ಟಿ‌ ಬೆಳೆಸಲು ಸಮುದಾಯ ಬಾಂಧವರ ಸಹಕಾರ ಅತ್ಯಗತ್ಯ. ಕುಶಾಲನಗರ, ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ‌ ಸಮುದಾಯ ಭವನಕ್ಕೆ‌ ನಿವೇಶನ ಒದಗಿಸಲು ಸರಕಾರ ಕ್ರಮವಹಿಸುವಂತೆ ಅವರು ಈ ಸಂದರ್ಭ ಮನವಿ‌ ಮಾಡಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಮೈಸೂರಿನ ಉಪನ್ಯಾಸಕ ಡಾ.ಕೃಷ್ಣಪ್ಪ ಮಾತನಾಡಿ ಕೈವಾರ ತಾತಯ್ಯ ಅವರ ಬಗ್ಗೆ ಮಾಹಿತಿ‌ ನೀಡಿದರು. ಜನಸಾಮಾನ್ಯರಿಗೆ ಅರಿವಾಗುವಂತಹ ಕೀರ್ತನೆಗಳನ್ನು ರಚಿಸಿದ ತ್ರಿಕಾಲ‌ ಜ್ಞಾನಿ ಕೈವಾರ ತಾತಯ್ಯ ಮಹಾನ್ ದಾರ್ಶನಿಕ ಎಂದರು.
ಅಲ್ಪಸಂಖ್ಯಾತರಾಗಿರುವ ಬಣಜಿಗ, ಬಲಿಜ ಸಮುದಾಯಕ್ಕೆ ಸರಕಾರ ಅಗತ್ಯ ಯೋಜನೆಗಳನ್ನು ರೂಪಿಸುವಂತಾಗಬೇಕಿದೆ. ಸರಕಾರದ ಗಮನ ಸೆಳೆಯಲು ಸಮುದಾಯ ಮತ್ತಷ್ಟು ಸಂಘಟಿತರಾಗಿವ ಅವಶ್ಯಕತೆಯಿದೆ ಎಂದರು. ಪ್ರತಿಷ್ಠೆಯ ಕಾರಣದಿಂದ ಸಮುದಾಯದ ಹೋರಾಟಗಳು ಅವನತಿ‌ ಕಾಣುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕ ಎನ್.ಸ್ವಾಮಿ ಮಾತನಾಡಿ, ಸಮುದಾಯ ಬಾಂಧವರು ಒಗ್ಗಟ್ಟಿನಿಂದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದಾನಿ ಸೋಮಶೇಖರ್ ಹಾಗೂ ಉಪನ್ಯಾಸಕ ಡಾ.ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಎಂ.ಆರ್.ಗಣೇಶ್, ಪ್ರಧಾನ‌ ಕಾರ್ಯದರ್ಶಿ ಟಿ.ಎಸ್.ನಿರಂಜನ್, ಖಜಾಂಚಿ ಟಿ.ಬಿ.ಸತೀಶ್, ಸಹ ಕಾರ್ಯದರ್ಶಿ ಟಿ.ಎನ್.ಜಯರಾಂ, ನಿರ್ದೇಶಕರಾದ ಶ್ರೀನಿವಾಸ್, ಸಿ.ಕೆ.ಕಾಂತರಾಜು, ತುಳಸಿ‌ಕಿರಣ್, ಸವಿತಾ ದಯಾನಂದ, ಸಿ.ಎನ್.ಮಹೇಶ್, ಪ್ರಮುಖರಾದ ಸುಬ್ರಹ್ಮಣ್ಯ, ನಿಸರ್ಗಸ್ವಾಮಿ, ನರೇಂದ್ರ ಸುಮಾ ಮತ್ತಿತರರು ಇದ್ದರು.
ಜಯಂತ್ಯೋತ್ಸವ ಅಂಗವಾಗಿ ಬೈಲುಕೊಪ್ಪದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ತೆರೆದ ವಾಹನದಲ್ಲಿ ಚಂಡೆ ಮೇಳ ಸಮ್ಮುಖದಲ್ಲಿ ಕೈವಾರ ತಾತಯ್ಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!