ಸಭೆ
ಸದಸ್ಯರ ಸಭಾತ್ಯಾಗ: ಕೋರಂ ಕೊರತೆ, 3ನೇ ಬಾರಿ ಮುಂದೂಡಲ್ಪಟ್ಟ ಕೂಡಿಗೆ ಗ್ರಾಪಂ ಸಭೆ
ಕುಶಾಲನಗರ, ಫೆ 15:ಕೂಡಿಗೆ ಗ್ರಾಮ ಪಂಚಾಯತಿಯ ಮಾಸಿಕ ಸಭೆಯು ಸತತ 4ನೇ ಬಾರಿಯೂ ಮುಂದೂಡಲಾದ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಏರ್ಪಡಿಸಲಾಗಿತ್ತು. ಆದರೆ ಸಭೆ ಆರಂಭಗೊಳ್ಳದಿದ್ದಂತೆಯೇ ಸಭೆಯಲ್ಲಿ ಹಾಜರಿದ್ದ ಕೆಲ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದ ಕಾರಣ ಸಭೆ ನಡೆಯಲಿಲ್ಲ. ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಿಲ್ ಗೆ ಅಧ್ಯಕ್ಷರು ಸಹಿ ಮಾಡಿದೆ ಸತಾಯಿಸುತ್ತಿದ್ದಾರೆ ಎಂಬುದು ಕೆಲ ಸದಸ್ಯ ಆರೋಪ. ಇದೇ ಕಾರಣದಿಂದ ಕಳೆದ ಮೂರು ಬಾರಿ ಕೂಡ ಸಭೆ ಬಹಿಷ್ಕರಿಸಲಾಗಿತ್ತು. ಬುಧವಾರ ಕೂಡ ಮತ್ತೆ ಅದೇ ಘಟನೆ ಮರುಕಳಿಸಿದೆ. ಕಾಮಗಾರಿಗಳ ಬಿಲ್ ಗೆ ಸಹಿ ಹಾಕಿದಲ್ಲಿ ಮಾತ್ರ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಸದಸ್ಯರಾದ ಟಿ.ಪಿ. ಹಮೀದ್ , ಅನಂತ್, ಅರುಣ್ ರಾವ್, ಶಿವಕುಮಾರ್ ಮತ್ತಿತರರು ಸಭೆ ಬಹಿಷ್ಕರಿಸಿ ಹೊರ ನಡೆದರು. ಈಗಾಗಲೆ ಕೈಗೊಂಡಿರುವ ಕಾಮಗಾರಿಗಳು ಲೋಪದಿಂದ ಕೂಡಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿನವರಿಗೆ ದೂರು ನೀಡಲಾಗಿದೆ. ಜಿಪಂ ಅಭಿಯಂತರರ ಸಮ್ಮುಖದಲ್ಲಿ ಸೂಕ್ತ ರೀತಿಯ ಪರಿಶೀಲನೆ ನಂತರವೇ ಸಹಿ ಹಾಕುವಂತೆ ಸಿಇಒ ಸೂಚಿಸಿರುವ ಕಾರಣ ಸಹಿ ಹಾಕಿಲ್ಲ. ಇದನ್ನು ವಿರೋಧಿಸಿ ಸದಸ್ಯರು ಸಭಾತ್ಯಾಗ ಮಾಡುತ್ತಿರುವ ಕಾರಣ ಕೋರಂ ಕೊರತೆಯಿಂದ ಸಭೆ ನಡೆಯುತ್ತಿಲ್ಲ ಎಂದು ಗ್ರಾಪಂ ಅಧ್ಯಕ್ಷೆ ಮಂಗಳ ಪ್ರಕಾಶ್ ತಿಳಿಸಿದರು. ಗ್ರಾಮ ಪಂಚಾಯತಿ ಮಾಸಿಕ ಸಭೆಯು ನಡೆಯದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾವುದೇ ಅಭಿವೃದ್ಧಿ ಕೆಲಸಗಳು ಅಗುತ್ತಿಲ್ಲ. ಅಲ್ಲದೆ ಗ್ರಾಮಸ್ಥರಿಗೆ ಬೇಕಾಗುವ ಗ್ರಾಮ ಪಂಚಾಯತಿಯ ಸಮರ್ಪಕವಾದ ದೃಢೀಕರಣ ಪತ್ರಗಳು ಸೇರಿದಂತೆ ವಿವಿಧ ಅರ್ಜಿಗಳ ವಿಲೇವಾರಿ ಅಗುತ್ತಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಬಾರಿ ತೊಂದರೆಗಳು ಅಗುತ್ತಿವೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿನವರನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್ ಶಿವಕುಮಾರ್, ವಾಣಿ, ಚಂದ್ರು ಜಯಶ್ರೀ ತಿಳಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಗಿರೀಶ್, ರತ್ನಮ್ಮ, ರವಿ, ಪಲ್ಲವಿ, ಲಕ್ಷ್ಮಿ, ಜಯಶೀಲ, ಅಭಿವೃದ್ಧಿ ಅಧಿಕಾರಿ ಅಂಜಲಾದೇವಿ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.