ಕುಶಾಲನಗರ, ಫೆ 13: ಕುಶಾಲನಗರ ಪುರಸಭೆ ವ್ಯಾಪ್ತಿಯ 16 ವಾರ್ಡ್ ಗಳಲ್ಲಿ ನಗರೋತ್ಹಾನ ಯೋಜನೆಯಡಿ ರೂ 5 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಯಿತು.
ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಮುಖ್ಯಾಧಿಕಾರಿ ಶಿವಪ್ಪನಾಯಕ್, ಸದಸ್ಯರಾದ ಎಂ.ಬಿ.ಸುರೇಶ್, ಕೆ.ಜಿ.ಮನು ಹಾಗೂ ಅಭಿಯಂತರ ರಂಗರಾಮ್ ಅವರುಗಳ ತಂಡ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ಈಗಾಗಲೆ ಮುಕ್ತಾಯಗೊಂಡಿರುವ ಕಾಂಕ್ರಿಟ್ ರಸ್ತೆ, ಚರಂಡಿ ಕಾಮಗಾರಿ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಸರಕಾರದ ಮಾರ್ಗಸೂಚಿಯಂತೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆಯಾ ವಾರ್ಡ್ ವ್ಯಾಪ್ತಿಯಲ್ಲಿನ ಕಾಮಗಾರಿಗಳನ್ನು ಆಯಾ ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಉತ್ತಮ ಗುಣಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ. ಶಾಸಕ ಅಪ್ಪಚ್ಚುರಂಜನ್ ಅವರ ಸೂಚನೆಯಂತೆ ಅತಿ ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಖುದ್ದು ಶಾಸಕರು ಮುತುವರ್ಜಿ ವಹಿಸಿ 10 ಕೋಟಿ ವೆಚ್ಚದಲ್ಲಿ ಹಾರಂಗಿ ರಸ್ತೆ, 50 ಲಕ್ಷ ವೆಚ್ಚದಲ್ಲಿ ಗೊಂದಿಬಸವನಹಳ್ಳಿ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಲ್ಲದೆ ಬಡಾವಣೆಗಳು, ಮುಖ್ಯರಸ್ತೆಗಳ ಅಗಲೀಕರಣ ಕಾಮಗಾರಿ ಕೂಡ ಕೈಗೊಳ್ಳಲಾಗಿದ್ದು ಕುಶಾಲನಗರ ಜನತೆಯ ಸಹಕಾರದಿಂದ ಕಾಮಗಾರಿಗಳು ಅಡ್ಡಿಯಿಲ್ಲದೆ ಸಾಗುತ್ತಿದೆ ಎಂದರು.
ಪುರಸಭೆ 7ನೇ ವಾರ್ಡ್ ಸದಸ್ಯ ಎಂ.ಬಿ.ಸುರೇಶ್ ಮಾತನಾಡಿ, ಶಾಸಕ ಅಪ್ಪಚ್ಚುರಂಜನ್ ಅವರ ಸಹಕಾರದಿಂದ ಹಲವು ವರ್ಷಗಳಿಂದ ಡಾಂಬರು ಕಾಣದ ರಸ್ತೆಗಳು ಇದೀಗ ಅಭಿವೃದ್ದಿಯಾಗುತ್ತಿವೆ. ನನ್ನ ವಾರ್ಡ್ ರೂ 30 ಲಕ್ಷ ಅನುದಾನ ಒದಗಿಸಿದ್ದಾರೆ. ಈ ವ್ಯಾಪ್ತಿಯ ಮುಳ್ಳುಸೋಗೆ ಭಾಗಕ್ಕೆ 5 ಕೋಟಿಯಷ್ಟು ಅನುದಾನ ಒದಗಿಸಿ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ. ಇದರಿಂದಾಗಿ ಈ ಭಾಗದ ರಸ್ತೆ, ಚರಂಡಿಗಳ ಸ್ವಚ್ಚತೆಯಿಂದ ಕೂಡಿದ್ದು ಈ ಭಾಗದ ಜನತೆಯ ಪರವಾಗಿ ಅವರು ಶಾಸಕರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಗುತ್ತಿಗೆದಾರರ ಸಂಪತ್ ಇದ್ದರು.
Back to top button
error: Content is protected !!