ಕುಶಾಲನಗರ, ಫೆ 01: ಕುಶಾಲನಗರ ಪುರಸಭೆ ವತಿಯಿಂದ ಭುವನಗಿರಿಯಲ್ಲಿ ಹೊಸದಾಗಿ ನಿರ್ಮಿಸಿರುವ ಪ್ರೊಸೆಸಿಂಗ್ ಶೆಡ್ ಅನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು.
ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುರಸಭೆ ವತಿಯಿಂದ ಪರಿಶಿಷ್ಟ ಜಾತಿ ಪಂಗಡದವರಿಗೆ ಸ್ವ ಉದ್ಯೋಗಕ್ಕಾಗಿ ಒದಗಿಸುವ ಹೊಲಿಗೆ ಯಂತ್ರ, ಹಿಂದುಳಿದ ವರ್ಗದ ಪಿಯು, ಎಸ್ಸೆಸ್ಸೆಲ್ಸಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್, ವಿಕಲಚೇತನರಿಗೆ ಜೀವವಿಮೆಯ ಎಲ್ಐಸಿ ಬಾಂಡ್ ವಿತರಣೆ ಕಾರ್ಯಕ್ರಮ ನಡೆಯಿತು.
ಶಾಸಕ ಅಪ್ಪಚ್ಚುರಂಜನ್ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಸ್ತಾಂತರಿಸಿದರು.
ಇದೇ ಸಂದರ್ಭ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕಸ ಸಂಗ್ರಹಣೆಗೆ ಹೊಸದಾಗಿ ಖರೀದಿಸಿರುವ ಆಟೋ ಟಿಪ್ಪರ್ ಗಳು ಹಾಗೂ ಟ್ರಾಕ್ಟರ್ ಗೆ ಪೂಜೆ ಸಲ್ಲಿಸಿ ಚಾಲನೆಗೊಳಿಸಲಾಯಿತು.
ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಕಸ ಸಮಸ್ಯೆ ನಿರ್ವಹಣೆಗೆ ಪುರಸಭೆ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ. ಮನೆಯಲ್ಲೇ ಕಸ ವಿಂಗಡಿಸಿ ನೀಡುವ ಮೂಲಕ ಸ್ವಚ್ಚತೆಗೆ ಮಹಿಳೆಯರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಪುರಸಭೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ವಿಳಂಭ ಉಂಟಾಗದಂತೆ ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಖುದ್ದು ತಾನು ಪುರಸಭೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಲಿದ್ದು ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಕ್ರಮವಗಿಸುವ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, ವಿವಿಧ ಯೋಜನೆಗಳ ಉಳಿದ 84 ಲಕ್ಷ ಅನುದಾನ ಮೊತ್ತವನ್ನು ಸಮರ್ಪಕವಾಗಿ ಬಳಕೆ ಮಾಡಿ 43 ಜನರಿಗೆ ಹೊಲಿಗೆ ಯಂತ್ರ, 31 ಟ್ಯಾಬ್, 14 ಮಂದಿಗೆ ಎಲ್ ಐ ಸಿ ಬಾಂಡ್ ವಿತರಣೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಈ ಮೊತ್ತ ವಿನಿಯೋಗಿಸಲಾಗಿದೆ ಎಂದರು.
ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಸುರಯ್ಯಭಾನು, ಮುಖ್ಯಾಧಿಕಾರಿ ಶಿವಪ್ಪನಾಯಕ್ ಸೇರಿದಂತೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.
ವೇದಿಕೆ ಕಾರ್ಯಕ್ರಮದ ಸಂದರ್ಭ ಕಾಂಗ್ರೆಸ್ ಪಕ್ಷದ ಸದಸ್ಯ ಪ್ರಮೋದ್ ಮುತ್ತಪ್ಪ ಶಾಸಕರ ಬಳಿ ಕೆಲವು ಸಮಸ್ಯೆ, ಅಹವಾಲು ಸಲ್ಲಿಕೆಗೆ ಮುಂದಾದರು. ಈ ಸಂದರ್ಭ ಬಿಜೆಪಿಯ ಕೆಲವು ಸದಸ್ಯರು ಕಾರ್ಯಕ್ರಮ ಮುಗಿದ ಬಳಿಕ ನಿಮ್ಮ ಸಮಸ್ಯೆ ತಿಳಿಸಿ ಎಂದು ಮಾತಿಗೆ ಅಡ್ಡಿಯುಂಟು ಮಾಡಿದ ಸಂದರ್ಭ ಪ್ರಮೋದ್ ಮುತ್ತಪ್ಪ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ ವಿಚಾರ ಹೊರತುಪಡಿಸಿ ಇತರೆ ವಿಚಾರ ಹೇಳಿ ಕಾಲಹರಣ ಮಾಡಲು ಮುಂದಾಗಿಲ್ಲ ಎಂದು ಹರಿಹಾಯ್ದರು. ಪುರಸಭೆಗೆ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಅಭಿವೃದ್ದಿಗೆ ಕುಶಾಲನಗರಕ್ಕೆ ವಿಶೇಷ ಪ್ಯಾಕೇಜ್ ಅಗತ್ಯವಿದೆ, ಖಾಯಂ ಅಭಿಯಂತರರನ್ನು ನೇಮಿಸಿ ದೀರ್ಘಾವಧಿ ಸೇವೆ ಸಲ್ಲಿಕೆಗೆ ಅಡ್ಡಿಯಾಗದಂತೆ ಕ್ರಮವಹಿಸುವಂತೆ ಪ್ರಮೋದ್ ಮುತ್ತಪ್ಪ ಶಾಸಕರ ಗಮನಸೆಳೆದರು.
Back to top button
error: Content is protected !!