ಕುಶಾಲನಗರ, ಜ 28: ಶಿರಂಗಾಲದ ಶ್ರೀ ಮಂಟಿಗಮ್ಮ ದೇವಾಲಯ ದರ್ಶನ ಪಡೆಯುವ ಭಕ್ತರಲ್ಲಿ ದುರ್ಗುಣಗಳು ಮಾಯವಾಗಿ ಸದಾ ಶಾಂತಿ ಲಭಿಸುವಂತಾಗಲಿ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಹೇಳಿದರು.
ಶಿರಂಗಾಲದಲ್ಲಿ ಶ್ರೀ ಮಂಟಿಗಮ್ಮ ದೇವಾಲಯ ಜೀರ್ಣೋದ್ದಾರ ಹಾಗೂ ಸ್ಥಿರಬಿಂದು ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವೆಡೆ ದೇವಾಲಯ ಜೀರ್ಣೋದ್ದಾರ, ನಿರ್ಮಾಣ ಕಾರ್ಯಗಳು ವಿಳಂಭ ಉಂಟಾಗುವುದು ಕಂಡಿದ್ದೇವೆ. ಆದರೆ ಇಲ್ಲಿ ಒಂದು ವರ್ಷದಲ್ಲಿಯೇ ನೂತನ ದೇವಾಲಯ ನಿರ್ಮಾಣವಾಗಿರುವುದು ಆಶ್ಚರ್ಯಕರ ಸಂಗತಿ. ಸ್ವತಃ ಮಂಟಿಗಮ್ಮನ ಆದೇಶದಂತೆ ದೇವಾಲಯ ನಿರ್ಮಾಣವಾದಂತಿದೆ. ಅಧಿಕಾರಿಗಳು, ದಾನಿಗಳ ಸಂಪೂರ್ಣ ಅಭೂತಪೂರ್ವ ಸಹಕಾರಕ್ಕೆ ದೇವರ ಶಕ್ತಿಯೇ ಕಾರಣ ಎಂದರು.
ದಿವ್ಯ ಉಪಸ್ಥಿತಿ ವಹಿಸಿ ಮಾತನಾಡಿದ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಮಾತನಾಡಿ, ದೂರದೂರುಗಳಲ್ಲಿ ನೆಲೆಸಿರುವವರ ಊರಿನ ಬಗ್ಗೆ ಕಾಳಜಿಯಿಂದ ದೇವಾಲಯ ಸುಂದರವಾಗಿ ನಿರ್ಮಾಣವಾಗಿದೆ. ಜನ್ಮಭೂಮಿಗೆ ಅತ್ಯುತ್ತಮ ಸೇವೆ ಸಲ್ಲಿಸಿ ಊರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಒಬ್ಬರರ ಸೇವೆಯೂ ಅಮೋಘ ಎಂದ ಅವರು, ಶರೀರ ಮತ್ತು ಸಂಪತ್ತು ಶಾಶ್ವಥವಲ್ಲ. ಅನಿಶ್ಚಿತ ಬದುಕಿನಲ್ಲಿ ದಾನ ಧರ್ಮ ಕಾರ್ಯ ಮಾಡಿ ತಮ್ಮ ಕರ್ತವ್ಯ ನಿರ್ವಹಿಸುವುದು, ಭಗವಂತನ ಹಾದಿಯಲ್ಲಿ ನಡೆಯುವುದೇ ಮುಖ್ಯ ಎಂದರು.
ದೇವಾಲಯ ಜೀರ್ಣೋದ್ಧಾರ ಹಣಕಾಸು ಸಮಿತಿ ಪ್ರಮುಖ ಎಸ್.ಎಸ್.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಲವು ಶತಮಾನಗಳ ಗ್ರಾಮಸ್ಥರ ಕನಸು ಇದೀಗ ಸಾಕಾರಗೊಂಡಿದೆ ಎಂದರು.
ಗಣೇಶ ಶಾಸ್ತ್ರಿ ತಂಡದಿಂದ ವೇದಘೋಷ ಮೊಳಗಿತು.
ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಶಿವಾನಂದ ದೇವಾಲಯದ ಇತಿಹಾಸ ಹಿನ್ನಲೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಚೇರ್ಮೆನ್ ನಂಜುಂಡಪ್ಪ, ದಾನಿ
ಟಿ.ಎಲ್.ಲೋಕೇಶ್, ದೇವಾಲಯ ತಾಂತ್ರಿಕ ಸಲಹೆಗಾರ ಆರ್.ಆರ್.ಕುಮಾರ್ ಮತ್ತಿತರರ ದಾನಿಗಳನ್ನು ಕುಟುಂಬ ಸಮೇತರಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಗ್ರಾಮದೇವತಾ ಸಮಿತಿ ಅಧ್ಯಕ್ಷ ಎಸ್.ಸಿ.ರುದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೆಟ್ಟದಪುರ ಮಠದ ಚನ್ನಬಸವದೇಶೀಕೇಂದ್ರ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಕುಂಚಟಿಗರ ಸಂಸ್ಥಾನಮಠದ ಶಾಂತವೀರಸ್ವಾಮಿ, ಕಲ್ಲಳ್ಳಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಬಸವಾಪಟ್ಟಣದ ಸ್ವತಂತ್ರ ಬಸವಲಿಂಗ ಸ್ವಾಮಿ, ನಿರಂಜನಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ದೇವಾಲಯ
ಪ್ರಧಾನ ಅರ್ಚಕ ಚಂದ್ರಪ್ಪ ಶಿರಂಗಾಲ ಗ್ರಾಪಂ ಅಧ್ಯಕ್ಷೆ ಗೀತಾ, ತೊರೆನೂರು ಗ್ರಾಪಂ ಅಧ್ಯಕ್ಷೆ ರೂಪಾ ಮಹೇಶ್ ಸೇರಿದಂತೆ ದೇವಾಲಯ ಸಮಿತಿ, ದೇವಾಲಯ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ದಾನಿಗಳು, ಗ್ರಾಮದ ಮುಖಂಡರು, ಜನಪ್ರತಿನಿಧಿಗಳು ಇದ್ದರು.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
Back to top button
error: Content is protected !!