ಪ್ರಕಟಣೆ
ದಂಡಿನಪೇಟೆಯಲ್ಲಿ ಕಂಗೊಳಿಸುತ್ತಿದೆ ಎರಡಂತಸ್ಥಿನ ಅಂಗನವಾಡಿ ಕೇಂದ್ರ
ಕುಶಾಲನಗರ, ಜ 14:ಕುಶಾಲನಗರದಲ್ಲಿ ಎರಡಂತಸ್ಥಿನ ಸುಂದರ ಅಂಗನವಾಡಿ ಕಟ್ಟಡ ಎಲ್ಲರ ಗಮನ ಸೆಳೆಯುತ್ತಿದೆ. ತೀರಾ ಶಿಥಿಲಾವಸ್ಥೆಯಲ್ಲಿರುವ ಅಥವಾ ಗಾತ್ರದಲ್ಲಿ ಸಾಧಾರಣವಾಗಿರುವ ಅಂಗನವಾಡಿ ಕೇಂದ್ರಗಳನ್ನು ಕಾಣುತ್ತಿದ್ದ ಸಾರ್ವಜನಿಕರಿಗೆ ಕುಶಾಲನಗರದ ದಂಡಿನಪೇಟೆಯಲ್ಲಿ ನಿರ್ಮಾಣಗೊಂಡಿರುವ ಎರಡಂತಸ್ಥಿನ ಅಂಗನವಾಡಿ ಕೇಂದ್ರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಶಾಸಕ ಅಪ್ಪಚ್ಚುರಂಜನ್ ಅವರ 18 ಲಕ್ಷ ರೂ ಅನುದಾನದಲ್ಲಿ ಕುಶಾಲನಗರ ಪುರಸಭೆಯ 4 ನೇ ವಾರ್ಡ್ ದಂಡಿನಪೇಟೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಣಸಿಗದಂತಹ ಅಪರೂಪದ ಕಟ್ಟಡ ನಿರ್ಮಾಣವಾಗಿದೆ. 2.5.ಸೆಂಟ್ ಅಳತೆ ನಿವೇಶನದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಅಂಗನವಾಡಿ ಕೇಂದ್ರವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಿಲಾಗಿದೆ. ಹಿಂದಿನ ಅಂಗನವಾಡಿ ಕೇಂದ್ರಕ್ಕೂ ಹೊಸ ಅಂಗನವಾಡಿ ಕೇಂದ್ರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಕೇಂದ್ರದ ಮಕ್ಕಳ ಪೋಷಕರು ಈ ಬಗ್ಗೆ ತೀವ್ರ ಸಂಭ್ರಮ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳು ಅತ್ಯಂತ ಸುಸಜ್ಜಿತ ಕಟ್ಟಡದಲ್ಲಿ ಕಲಿಕೆಗೆ ತೆರಳುವುದು ಹರ್ಷ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಎರಡಂತಸ್ಥಿನ ಕಟ್ಟಡದ ಕೆಳಭಾಗ ಶೈಕ್ಷಣಿಕ ಚಟುವಟಿಕೆ ಮೇಲೆ ಉಪಹಾರ ಗೃಹದಂತೆ ಬಳಸಲಾಗುತ್ತಿದೆ. ಇಂತಹ ಕಟ್ಟಡಗಳು ಎಲ್ಲೆಡೆ ಸ್ಥಾಪನೆಯಾದಲ್ಲಿ ಮಕ್ಕಳ ಸುರಕ್ಷತೆ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಾಗಲಿದೆ ಎಂಬುದು ಪೋಷಕರು ಅಭಿಪ್ರಾಯ.
ವಿಸ್ತೀರ್ಣ ಕೊರತೆ, ಎರಡಂತಸ್ಥು: ಸಾಮಾನ್ಯವಾಗಿ ಹೊಸ ಅಂಗನವಾಡಿ ನಿರ್ಮಾಣ ಸಂದರ್ಭ ನಿವೇಶನ ಅಳತೆ ಸಮರ್ಪಕವಾಗಿದ್ದಲ್ಲಿ ಕೆಳಹಂತಸ್ತು ಕಟ್ಟಡ ನಿರ್ಮಾಣ ಮಾಡಲಾಗುವುದು. ದಂಡಿನಪೇಟೆಯಲ್ಲಿ ನಿವೇಶನ ಕನಿಷ್ಠ 2.5 ಅಳತೆಯಲ್ಲಿದ್ದ ಕಾರಣ ಮಕ್ಕಳ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಯೋಜನೆ ರೂಪಿಸಿ ಎರಡಂತಸ್ಥು ಕಟ್ಟಡ (g+1) ನಿರ್ಮಿಸಲಾಗಿದೆ.
ಶಾಸಕರು ಅತ್ಯಂತ ಕಾಳಜಿ ವಹಿಸಿ ಈ ಸುಂದರ ಅಂಗನವಾಡಿ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಕುಶಾಲನಗರದ ಟೌನ್ ಕಾಲನಿ ಮತ್ತು ವಿವೇಕಾನಂದ ಬಡಾವಣೆಯಲ್ಲಿ ಕೂಡ ಇದೇ ಮಾದರಿಯ ಎರಡು ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸುವ ಭರವಸೆ ನೀಡಿದ್ದಾರೆ.
-ಬಿ.ಜೈವರ್ಧನ್, ಅಧ್ಯಕ್ಷರು, ಪುರಸಭೆ, ಕುಶಾಲನಗರ.