ಕುಶಾಲನಗರ, ಡಿ 28:
ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆಯಿತು.
ಸಭೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಗೈರು ಹಾಜರಾದ ಬಗ್ಗೆ ಅಧ್ಯಕ್ಷ ಸಿ. ಎಲ್.ವಿಶ್ವ ಖಂಡನೆ ವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ಸೂಚಿಸಿದರು.
ನೀರಾವರಿ ಇಲಾಖೆ ವತಿಯಿಂದ ಗ್ರಾಪಂ ವ್ಯಾಪ್ತಿಯಲ್ಲಿ
ಕೈಗೊಂಡಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು. ನಾಲೆ ಹೂಳೆತ್ತುವಂತೆ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು.
ಪರಿಶಿಷ್ಟ ಜಾತಿ, ಪಂಗಡದವರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲು ಸಮರ್ಪಕವಾಗಿ ಕ್ರಮವಹಿಸುವಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಸಭೆಯಲ್ಲಿದ್ದ ಚೆಸ್ಕಾಂ ಅಧಿಕಾರಿಗೆ ಗ್ರಾಪಂ ಅಧ್ಯಕ್ಷ ವಿಶ್ವ ಸೂಚಿಸಿದರು. ಅಪಾಯದ ಸ್ಥಿತಿಯಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಿಸಬೇಕು. ಕೆಳಗೆ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಅವರು ಚೆಸ್ಕಾಂ ಅಧಿಕಾರಿ ಲವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೆ ಈ ಸಮಸ್ಯೆಯನ್ನು ಬಗೆಹರಿಸಲು ಕೂಡಲೆ ಕ್ರಮಕೈಗೊಳ್ಳಲು ಒತ್ತಾಯಿಸಿದರು. ತೋಟಗಳಲ್ಲಿ, ಶಾಲಾ ಆವರಣದಲ್ಲಿ ವಿದ್ಯುತ್ ಮಾರ್ಗಗಳನ್ನು ಸುಸ್ಥಿಯಲ್ಲಿಡಲು ಅಧ್ಯಕ್ಷ ವಿಶ್ವ ಸೂಚಿಸಿದರು.
ಗ್ರಾಮದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಶುಪಾಲನೆ ಇಲಾಖೆ ವೈದ್ಯರು, ಶುಶ್ರೂಷಕರು ವಾರದ 5 ದಿನ ಸೇವೆ ಒದಗಿಸಬೇಕು. ಇಲ್ಲದಿದ್ದಲ್ಲಿ ಚಿಕಿತ್ಸಾ ಕೇಂದ್ರದ ಮುಂದೆ ಗ್ರಾಪಂ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಸಿ.ಎಲ್.ವಿಶ್ವ ಎಚ್ಚರಿಸಿದರು. ಈ ಬಗ್ಗೆ ಪಶುಸಂಗೋಪನಾ ಸಚಿವರಿಗೆ ಪತ್ರ ಬರೆಯಲಾಗುವುದು ಎಂದರು.
ಪ್ರವಾಸಿಗರ ವಾಹನ ವೇಗಕ್ಕೆ ಕಡಿವಾಣ ಹಾಕಬೇಕು, ಪ್ರವಾಸಿ ತಾಣಗಳಲ್ಲಿ ಮಾದಕ ವ್ಯಸನ ನಿಯಂತ್ರಣ, ಬೀಡಾಡಿ ದನಗಳ ನಿಯಂತ್ರಣಕ್ಕೆ ಸಹಕಾರ ನೀಡಲು ಪೊಲೀಸ್ ಇಲಾಖೆಯನ್ನು ಕೋರಲಾಯಿತು.
ಗ್ರಾಮದಲ್ಲಿ ಸ್ಮಶಾನ ಸಮಸ್ಯೆ ಇತ್ಯರ್ಥಪಡಿಸಬೇಕು, ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಒದಗಿಸುವಂತೆ ಗ್ರಾಮಲೆಕ್ಕಿಗರನ್ನು ಕೋರಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಚೆಸ್ಕಾಂ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೊಲೀಸ್, ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ, ಸ್ಥಳೀಯ ಖಾಸಗಿ ಬ್ಯಾಂಕ್ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಇಲಾಖೆ ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಮೀರಾ, ಸದಸ್ಯರಾದ ಆರ್.ಕೆ.ಚಂದ್ರ, ಕುಸುಮ, ಜಾಜಿ, ಪಿಡಿಒ ಕಲ್ಪ, ಕಾರ್ಯದರ್ಶಿ ಶೇಷಗಿರಿ ಇದ್ದರು.
Back to top button
error: Content is protected !!