ಕ್ರೈಂ
ಕುಶಾಲನಗರ ಪೊಲೀಸ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಿಕ್ಷಕ ಅಂದರ್
ಕುಶಾಲನಗರ, ಡಿ 20: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಯೋಗೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಬೇತು ಸ.ಹಿ.ಪ್ರಾ.ಶಾಲಾ ಶಿಕ್ಷಕ ಕೆ.ಜಿ.ನಾಗೇಂದ್ರ ಎಂಬವರು ಜೈಲು ಪಾಲಾಗಿದ್ದಾರೆ.
ಕುಶಾಲನಗರ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯ ಪತಿಯಾಗಿರುವ ನಾಗೇಂದ್ರ ತಾನು ವಾಸವಿರುವ ಪೊಲೀಸ್ ಕ್ವಾಟ್ರರ್ಸ್ ಪಕ್ಕದ ವಸತಿಗೃಹದಲ್ಲಿ ವಾಸವಿದ್ದ ಪೊಲೀಸ್ ಪೇದೆಯೊಂದಿಗೆ ಕಲಹ ಮಾಡಿಕೊಂಡಿದ್ದರು. ಈ ಬಗ್ಗೆ ವಿಚಾರಿಸಲು ನವೆಂಬರ್ ತಿಂಗಳಲ್ಲಿ ಕುಶಾಲನಗರ ಪೊಲೀಸ್ ಠಾಣೆಯಿಂದ ಬರ ಹೇಳಿದ್ದ ಸಂದರ್ಭ ನಾಗೇಂದ್ರ ಠಾಣೆಗೆ ತೆರಳಿದ್ದ ಸಂದರ್ಭ ಅಲ್ಲಿಯೂ ಕೂಡ ಪೊಲೀಸರೊಂದಿಗೆ ಶಿಕ್ಷಕ ವಾಗ್ವಾದ ನಡೆಸಿದ್ದಾನೆ.
ಇದೇ ಸಂದರ್ಭ ಕರ್ತವ್ಯ ನಿಮಿತ್ತ ನಗರ ಠಾಣೆಗೆ ಆಗಮಿಸಿ ಗ್ರಾಮಾಂತರ ಠಾಣಾ ಸಿಬ್ಬಂದಿ ಯೋಗೇಶ್ ಅವರ ಮೇಲೆ ಹಲ್ಲೆ ಶಿಕ್ಷಕ ನಾಗೇಂದ್ರ ನಡೆಸಿದ್ದಾರೆ. ಮೊಬೈಲ್ ನೋಡುತ್ತಾ ಒಳಗೆ ಬಂದ ಯೋಗೇಶ್ ಅವರನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದೀಯ ಎಂದು ಆಕ್ಷೇಪಿಸಿ ಶಿಕ್ಷಕ ಕೈ ಮಾಡಿದ್ದಾರೆ.
ಈ ಬಗ್ಗೆ ಪೊಲೀಸ್ ಸಿಬ್ಬಂದಿ ಯೋಗೇಶ್ ನ. 29 ರಂದು ದೂರು ನೀಡಿದ್ದರು. ಆದರೆ ಅಂದಿನಿಂದ ಪರಾರಿಯಾಗಿದ್ದ ಶಿಕ್ಷಕ ನಾಗೇಂದ್ರ ಅಯ್ಯಪ್ಪ ಸ್ವಾಮಿ ವೃತ ಆರಂಭಿಸಿ ಮಾಲೆ ಧರಿಸಿ ಮಡಿಕೇರಿಯಲ್ಲಿ ಸ್ನೇಹಿತರೊಂದಿಗೆ ತಂಗಿದ್ದರು ಎನ್ನಲಾಗಿದೆ. ಭಾನುವಾರ ಕುಶಾಲನಗರಕ್ಕೆ ಆಗಮಿಸಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿದ ಕುಶಾಲನಗರ ಪೊಲೀಸರು ಶಿಕ್ಷಕನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.