ಕುಶಾಲನಗರ, ಡಿ 17: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಕೊಡಗಿನ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರವಾಗಿ ಘೋಷಣೆ ಮಾಡಲಾಗುವುದು ಎಂದು ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ತಿಳಿಸಿದರು.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿದರೆ ಎಎಪಿ ಕೂಡ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದುಕೊಂಡಿದೆ. ದೆಹಲಿ ಮಾದರಿಯಲ್ಲಿ ಜನಪರ ಆಡಳಿತ ರಾಜ್ಯದಲ್ಲೂ ಅಗತ್ಯವಿದೆ. ಕೋಮುವಾದ, ಲಂಚಕೋರತನ, ದುರಾಡಳಿತ, ಭ್ರಷ್ಟಾಚಾರ, ಸುಳ್ಳಿನ ರಾಜಕಾರಣದಿಂದ ಜನತೆ ರೋಸಿಹೋಗಿದ್ದು ಇದಕ್ಕೆ ಕಡಿವಾಣ ಹಾಕಲು ಎಎಪಿ ಅಧಿಕಾರಕ್ಕೆ ಬರುವ ಅನಿವಾರ್ಯ ಬಂದೊದಗಿದೆ ಎಂದರು.
ಗ್ರಾಮ ಪಂಚಾಯಿತಿಯಿಂದ ಹಿಡಿದು ಶಾಸಕರು, ಸಂಸದರು, ಒಂದೇ ಪಕ್ಷದವರು ಇದ್ದು, ಕೊಡಗಿನಲ್ಲಿ ಸುಮಾರು 15-20 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಉನ್ನತ ಶಿಕ್ಷಣಕ್ಕಾಗಿ, ವೈದ್ಯಕೀಯ ಚಿಕಿತ್ಸೆಗಾಗಿ ಇಂದು ಕೊಡ ಜನರು ಅಕ್ಕ ಪಕ್ಕದ ಜಿಲ್ಲೆಗಳಿಗೆ ಅವಲಂಬಿಸಿರುತ್ತದೆ. ಯುವಕ ಯುವತಿಯರಿಗೆ ಉದ್ಯೋಗಾವಕಾಶ ಜಿಲ್ಲೆಯಲ್ಲಿ ಬಹಳ ಕಡಿಮೆ ಇದೆ. “ಡಬಲ್ ಇಂಜಿನ್” ಸರ್ಕಾರದ ಕೊಡುಗೆ ಜಿಲ್ಲೆಗೆ ಶೂನ್ಯ, ಬದಲಾಗಿ ಕೊಡಗಿನ ಜನತೆಗೆ “ಡಬಲ್ ಹೊರೆ” ಸರ್ಕಾರ ಆಗಿದೆ. ಕೇಂದ್ರ ಸರ್ಕಾರ ಒಂದು ಕಡೆ ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆ ಬರೆ ಬಿದ್ದಂತಾಗಿದೆ.
ಕೇಂದ್ರದಲ್ಲಿ, ರಾಜ್ಯದಲ್ಲಿ ಮೂರು ಪಕ್ಷಗಳು ಅಧಿಕಾರ ಮಾಡಿದರೂ ಇದುವರೆಗೆ ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಆಗಿಲ್ಲ ಎಂದು ಆರೋಪಿಸಿದರು.
ಗ್ರಾಮ ಸಂಪರ್ಕ ಅಭಿಯಾನ ಮೂಲಕ ಮನೆ,ಮನಗಳಿಗೆ ಎಎಪಿ ಯನ್ನು ತಲುಪಿಸುವ ಕಾರ್ಯದೊಂದಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ರಚನೆಗೆ ಚಾಲನೆ ನೀಡಲಾಗಿದೆ.
ಆಮ್ ಆದ್ಮಿ ಪಕ್ಷ ಮಾತ್ರ ಕೊಡಗಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಪೈಪೋಟಿಯ ಸ್ಪರ್ಧೆ ಒಡ್ಡಲಿದ್ದೇವೆ. ಜನಾಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದು ಮತದಾರರು ಎಎಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.
ಮೈಸೂರು-ಕೊಡಗು ವಲಯ ಉಸ್ತುವಾರಿ ಅಬ್ದುಲ್ ರಜಾಕ್ ಮಾತನಾಡಿ, ದೇಶದಲ್ಲಿ ಸಮಸ್ಯೆಗಳ ಬಗ್ಗೆ ಜನತೆ ದನಿ ಎತ್ತಿದ ಪ್ರತಿ ಸಂದರ್ಭದಲ್ಲಿ ಬೇರೆ ವಿಚಾರಗಳನ್ನು ವೈಭವೀಕರಿಸಿ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ಆಕಾಂಕ್ಷಿ ಕಿಶನ್ ಮಾತನಾಡಿ, ಎಎಪಿ ತತ್ವ ಸಿದ್ದಾಂತಗಳಿಂದ ಪ್ರಭಾವಿತನಾಗಿ ಜೆಡಿಎಸ್ ತೊರೆದು ಎಎಪಿ ಸೇರ್ಪಡೆಗೊಂಡಿದ್ದು ಈ ಮೂಲಕ ಜನರ ಸೇವೆ ಮಾಡಲು ಹಂಬಲಿಸುತ್ತಿದ್ದೇನೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ಭೋಜಣ್ಣ ಸೋಮಯ್ಯ, ಕಾರ್ಯದರ್ಶಿ ಪೃಥ್ವಿ, ಕೊಡಗು ಮತ್ತು ಮೈಸೂರಿನ ಮುಖಂಡರಾದ ಎಂ.ಕೆ.ಅಪ್ಪಯ್ಯ, ರಂಗಯ್ಯ ಇದ್ದರು.
Back to top button
error: Content is protected !!