ಕುಶಾಲನಗರ, ಡಿ 09:
ಕೂಡಿಗೆ ಗ್ರಾಮಪಂಚಾಯತ್ ವತಿಯಿಂದ ಪಂಚಾಯ್ತಿ ವ್ಯಾಪ್ತಿಯ ಭುವನಗಿರಿ ಕಕ್ಕೆಹೊಳೆ ನಾಲೆಯಿಂದ ಕಸ ವಿಲೇವಾರಿ ಘಟಕದವರೆಗೆ ನಾಲೆ ಹೂಳೆತ್ತಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಈ ಕಾಮಗಾರಿ ಬಗ್ಗೆ ಕೆಲವರು ವಿನಾಕಾರಣ ಅಪಪ್ರಚಾರದಲ್ಲಿ ತೊಡಗಿರುವ ಬಗ್ಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಅಂದಾಜು 8 ಲಕ್ಷ ವೆಚ್ಚದಲ್ಲಿ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದ ಈ ನಾಲೆ ಕಾಮಗಾರಿಯನ್ನು ಗ್ರಾಪಂ ಮೂಲಕ ಉದೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ. ನಾಲೆ ಹೂಳೆತ್ತುವುದರೊಂದಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. ಆದರೆ ಸ್ಥಳೀಯ ವ್ಯಕ್ತಿ ಮತ್ತು ಆತನ ಸಂಗಡಿಗರು ಕಾಮಗಾರಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಕಾಡುಮಯವಾಗಿದ್ದ ಕಿರಿದಾದ ರಸ್ತೆಯಲ್ಲಿ ಸಂಚರಿಸುವುದು ದುಸ್ಥರವಾಗಿತ್ತು. ಈ ಬಗ್ಗೆ ಹಲವು ಬಾರಿ ಪಂಚಾಯ್ತಿಗೆ ಮನವಿ ಸಲ್ಲಿಸಲಾಗಿತ್ತು. ನಾಲೆ ಹೂಳೆತ್ತುವ ಕಾಮಗಾರಿಯೊಂದಿಗೆ ರಸ್ತೆ ಅಗಲೀಕರಣ ಕೂಡ ನಡೆದಿದೆ. ಇದು ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಉಂಟುಮಾಡಿದೆ. ಆದರೆ ವೈಯಕ್ತಿಕ ದ್ವೇಷದಿಂದ ಕಾಮಗಾರಿಗೆ ಬಗ್ಗೆ ಅಪಪ್ರಚಾರ ನಡೆಸಿ ಅಡ್ಡಿಯುಂಟು ಮಾಡುತ್ತಿರುವುದು ಸರಿಯಲ್ಲ ಎಂದು ಭುವನಗಿರಿ ಗ್ರಾಮದ ಬಿ.ಎನ್.ಸುರೇಶ್, ಎಚ್.ಬಿ.ಗೌರಮ್ಮ, ಭಾಗ್ಯ, ಎಚ್.ಎಸ್.ವಿಜಯೇಂದ್ರ, ಎಚ್.ಆರ್.ರಮೇಶ್, ಕೆ.ಎಸ್.ಜೋಯಪ್ಪ, ಮಹದೇವ, ರಮೇಶ್, ನಾಗರಾಜು, ರವಿ, ಗಿರೀಶ್, ಶ್ರೀನಿವಾಸ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಗ್ರಾಪಂ ಸದಸ್ಯರುಗಳಾದ ಟಿ.ಪಿ.ಹಮೀದ್, ಅನಂತಕುಮಾರ್, ಅರುಣ್ ರಾವ್ ಅವರುಗಳು, ಅಂದಾಜು ಪಟ್ಟಿ ಸಿದ್ದಪಡಿಸಿ ನಿಯಮಾನುಸಾರ ಕಾಮಗಾರಿ ಕೈಗೊಳ್ಳಲಾಗಿದೆ. ಯಾವುದೇ ಯಂತ್ರೋಪಕರಣಗಳು ಬಳಸಿ ಕಾಮಗಾರಿ ನಡೆಸಿಲ್ಲ. ನಾಲೆ ಹೂಳೆತ್ತಿದ್ದ ಮಣ್ಣನ್ನು ಸ್ಥಳೀಯ ರೈತರು ಅವರೇ ಜೆಸಿಬಿ ಬಳಸಿ ಟ್ರಾಕ್ಟರ್ ಮೂಲಕ ಮಣ್ಣನ್ನು ಜಮೀನಿಗೆ ಕೊಂಡೊಯ್ದಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಉಂಟುಮಾಡದೆ ಸಹಕರಿಸುವಂತೆ ಕೋರಿದರು.
Back to top button
error: Content is protected !!