ಬ್ರಾಹ್ಮಣ, ಬ್ರಾಹ್ಮಣ್ಯ ಬಗ್ಗೆ ಅವಹೇಳನ: ಕುಶಾಲನಗರದಲ್ಲಿ ಬ್ರಾಹ್ಮಣ ಸಂಘದಿಂದ ಪ್ರತಿಭಟನೆ

ಕುಶಾಲನಗರ, ನ 25: ಸಿದ್ದರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಪಿ.ಮಲ್ಲೇಶ್ ಎಂಬವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡಿಸಿ ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಶಾಲನಗರದ ಗಣಪತಿ ದೇವಾಲಯದಿಂದ ರಥಬೀದಿ ಮೂಲಕ ಡೋಲು, ಜಾಗಟೆ, ಶಂಖಗಳನ್ನು ಮೊಳಗಿಸಿ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಮಲ್ಲೇಶ್ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ
ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು,
ಇದೇ 15 ನೇ ತಾರೀಖು ಸಿದ್ದರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಿ.ಮಲ್ಲೇಶ್ ಎನ್ನುವ ಮೂರ್ಖ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.
ಬ್ರಾಹ್ಮಣರ ಕೋಪಕ್ಕೆ ತುತ್ತಾಗಿರುವ ಯಾರು ಉದ್ದಾರವಾಗಿಲ್ಲ. ನಾವು ನಮ್ಮ ವೇದ ಮಂತ್ರಗಳಿಂದಲ್ಲೇ ನಮ್ಮ ಶಕ್ತಿಯನ್ನು ತೋರಿಸುತ್ತೇವೆ. ನಾವು ಯಾವುದೇ ಪಕ್ಷದಲ್ಲಿ ಇರಲಿ, ಬ್ರಾಹ್ಮಣರನ್ನು ನಿಂಧಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಇದರ ಫಲ ಪಡೆಯುತ್ತಿರ ಎಂದು ಸಿದ್ದರಾಮಯ್ಯ ಮತ್ತು ಮಲ್ಲೇಶ್ ಅವರನ್ನು ಎಚ್ಚರಿಸಿದರು.
ವೇದ ಬ್ರಹ್ಮ ಸುಬ್ಬರಾಮು ಮಾತನಾಡಿ, ವೇದ ಉಪನಿಷತ್ತು ಶಕ್ತಿಯನ್ನು ಅರಿತ ಅಮೆರಿಕ ನಾಸಾದಲ್ಲಿ ಉಪಯೋಗಿಸುತ್ತಿದೆ. ಹಿಂದುಗಳ ಮನೆಗಳಲ್ಲಿ ಯಾವುದೇ ಶುಭ ಮತ್ತು ಅಶುಭ ಕಾರ್ಯ ನಡೆದರು ಮಂತ್ರ ಘೋಷ ಮೊಳಗುತ್ತೆ. ಅಂತಹ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವ ಪುಣ್ಯ ಭೂಮಿಯಲ್ಲಿ ವಿಷದ ಬೀಜ ಬಿತ್ತುವ ಪ್ರಯತ್ನ ಖಂಡಿತ ಫಲಿಸುವುದಿಲ್ಲ. ಸರ್ವೇ ಜನಃ ಸುಖಿನೋ ಭವಂತು ಎಂದು ಹೇಳುವ ಬ್ರಾಹ್ಮಣ ಮತ್ತು ಬ್ರಾಹ್ಮಣಿಕೆ ಬಗ್ಗೆ ಯಾರೇ ಮಾತನಾಡಿದರು ಉದ್ಧಾರವಾಗುವುದಿಲ್ಲ ಎಂದರು.
ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಮಾತನಾಡಿ, ಸರ್ಕಾರ ಕೂಡಲೇ ಇಂತಹ ಕೆಟ್ಟ ಜನಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬ್ರಾಹ್ಮಣರನ್ನು ನಿಂಧಿಸುವುದರಿಂದ ಅವರಿಗೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚು. ಪಿ.ಮಲ್ಲೇಶ್ ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಸಾರ್ವಜನಿಕವಾಗಿ ಬ್ರಾಹ್ಮಣರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ
ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ
ಕಾರ್ಯದರ್ಶಿ ಅನೀಲ್ ಶೇಷಾದ್ರಿ,
ಖಜಾಂಚಿ ಶ್ರೀದೇವಿ ರಾವ್,
ನಾಗೇಂದ್ರ ಬಾಬು, ಡಾ.ರಾಧಾಕೃಷ್ಣ, ಎಂ.ವಿ.ನಾರಾಯಣ, ಮಂಜುನಾಥ್ ಗುಂಡೂರಾವ್, ರಮಾ ವಿಜೇಂದ್ರ, ರಜಿನಿ ಪ್ರದೀಪ್, ಅರ್ಚಕರಾದ ಸುಬ್ರಹ್ಮಣ್ಯ ಭಟ್, ಗಿರೀಶ್ ಭಟ್, ಯೋಗೀಶ್ ಭಟ್ ಇತರರು ಹಾಜರಿದ್ದರು.