ಪ್ರಕಟಣೆ

ಕುಶಾಲನಗರದಲ್ಲಿ ಡಿ.5 ರಂದು ಹನುಮ ಜಯಂತಿ: ಮಂಟಪಗಳ ಅದ್ದೂರಿ ಶೋಭಾಯಾತ್ರೆ

ಕುಶಾಲನಗರ, ನ 15: ಕುಶಾಲನಗರದ ಹನುಮಂತೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಡಿಸೆಂಬರ್ 5 ರಂದು ಕುಶಾಲನಗರದಲ್ಲಿ ಎರಡನೇ ವರ್ಷದ ಹಮನು ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಹಿನ್ನಲೆಯಲ್ಲಿ ಮಂಟಪಗಳ ಶೋಭಾ ಯಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಡಿ.5 ರಂದು ಸೋಮವಾರ ಅದ್ದೂರಿಯಾಗಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಶೋಭಾಯಾತ್ರೆಯಲ್ಲಿ ಕುಶಾಲನಗರ, ಮುಳ್ಳುಸೋಗೆ, ಬೈಚನಹಳ್ಳಿ, ಮಾದಾಪಟ್ಟಣ, ಗುಡ್ಡೆಹೊಸೂರು ಗ್ರಾಮಗಳಿಂದ ವಿದ್ಯುತ್‌ ಅಲಂಕೃತ ಭವ್ಯ ಮುಂಟಪಗಳು ಪಾಲ್ಗೊಳ್ಳಲಿವೆ. ಅಂದು ಸಂಜೆ 6 ಗಂಟೆಗೆ ಆಯಾಯ ಗ್ರಾಮಗಳಿಂದ ಹೊರಟು ರಾತ್ರಿ 8.30 ಕ್ಕೆ ಎಲ್ಲಾ ಮಂಟಪಗಳು ಕುಶಾಲನಗರ ಮಹಾಗಣಪತಿ ದೇವಸ್ಥಾನ ಮುಂಭಾಗಕ್ಕೆ ಬಂದು ಸೇರಲಿವೆ. ಅಲ್ಲಿಂದ ಪಟ್ಟಣದ ಪ್ರಮುಖ‌ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಪ್ರಧಾನ‌ ಕಾರ್ಯದರ್ಶಿ ಕೆ.ಎನ್.ದೇವರಾಜು ಮಾತನಾಡಿ, ಮಂಟಪಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಹುಮಾನಗಳನ್ನು ನೀಡಲಾಗುವುದು. ಬಹುಮಾನಗಳನ್ನು ಆಯ್ಕೆ ಮಾಡಲು, ಕುಶಾಲನಗರದ ಹಿರಿಯರ, ಸಮಾಜ ಸೇವಕರ ಒಂದು ತಂಡವನ್ನು ರಚಿಸಿ ಆ ತಂಡದ ಮೂಲಕ ಉತ್ತಮ‌ ಮಂಟಪಗಳ ಅಯ್ಕೆ ಮಾಡಲಾಗುತ್ತದೆ. ಈ ವರ್ಷ ಶೋಭಾಯಾತ್ರೆಯಲ್ಲಿ ಏಳು ವಿದ್ಯುತ್ ಅಲಂಕೃತ ‌ಮಂಟಪಗಳು ಭಾಗವಹಿಸಲಿವೆ. ಕುಶಾಲನಗರದ ಎಚ್.ಆರ್.ಪಿ.ಕಾಲನಿಯ ಶ್ರೀರಾಮ ಮಂದಿರದ ಹಿಂದೂ ಜಾಗರಣ ವೇದಿಕೆ ಹಾಗೂ ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿ, ಮಾದಾಪಟ್ಟಣದ ಶ್ರೀ ರಾಮದೂತ ಜಯಂತಿ ಆಚರಣೆ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆ, ಗುಡ್ಡೆಹೊಸೂರಿನ ಶ್ರೀ ವೀರಾಂಜನೇಯ ಸೇವಾ ಸಮಿತಿ, ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಗುಮ್ಮನಕೊಲ್ಲಿಯ ಶ್ರೀ ಬಸವೇಶ್ವರ ಯುವಕ ಸಂಘ, ಬೈಚನಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನ ಸಮಿತಿ ಹಾಗೂ ಗೆಳೆಯರ ಬಳಗ, ಕಾಳಮ್ಮ‌ ಕಾಲನಿಯ ಶ್ರೀ ಕಾಳಿಕಾಂಬ ದೇವಸ್ಥಾನ ಸಮಿತಿ, ಗೋಪಾಲ್ ಸರ್ಕಲ್ ನ ಶ್ರೀ ಗಜಾನನ ಯುವಕ ಸಂಘದ ಮಂಟಪಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಬಿ.ಎಲ್.ಜಗದೀಶ್, ಖಜಾಂಚಿ ಗಿರಿ, ಸದಸ್ಯರಾದ ಡಿ.ಸಿ.ಮಂಜುನಾಥ್, ಪ್ರಜ್ವಲ್, ಶಶಿಕುಮಾರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!