ಪ್ರತಿಭಟನೆ
ಕುಶಾಲನಗರ ಪ.ಪಂ ಮುಖ್ಯಾಧಿಕಾರಿ ವರ್ಗಾವಣೆ ಖಂಡಿಸಿ ಪ್ರಜ್ಞಾವಂತ ನಾಗರಿಕ ವೇದಿಕೆ ಪ್ರತಿಭಟನೆ
ಕುಶಾಲನಗರ, ಅ 07: ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವರ್ಗಾವಣೆ ರದ್ದುಗೊಳಿಸುವಂತೆ ಆಗ್ರಹಿಸಿ ಕುಶಾಲನಗರದ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ವೇದಿಕೆ ಪ್ರಮುಖ ವಿ.ಪಿ.ಶಶಿಧರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಪಟ್ಟಣ ಪಂಚಾಯತ್ ಕಛೇರಿ ವರೆಗೆ ಕಾಲ್ನಡಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ವಿರುದ್ದ ಧಿಕ್ಕಾರ ಕೂಗಿದರು. ಓರ್ವ ದಕ್ಷ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ಆ ಜಾಗಕ್ಕೆ ಭ್ರಷ್ಟಾಚಾರ ಕಳಂಕ ಹೊತ್ತಿರುವ ಅಧಿಕಾರಿಯೊಬ್ಬರನ್ನು ನಿಯೋಜಿಸುವ ಮೂಲಕ ಅಪ್ಪಚ್ಚುರಂಜನ್ ಭೂ ಮಾಫಿಯಾಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಕೂಡಲೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರ ವರ್ಗಾವಣೆ ರದ್ದುಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಪಿ.ಶಶಿಧರ್, ಕುಶಾಲನಗರದಲ್ಲಿ ಭೂಮಾಫಿಯ ಮಿತಿಮೀರಿದೆ. ಅಕ್ರಮ ದಾಖಲೆಗಳನ್ನು ಸೃಷ್ಠಿಸಿ ಸರಕಾರಿ ಭೂಮಿಗಳನ್ನು ಕಬಳಿಸುವ ಹುನ್ನಾರಗಳು ನಡೆಯುತ್ತಿವೆ. ಅನಧಿಕೃತ, ಅಕ್ರಮ ಲೇಔಟ್ ಗಳ ನಿಯಮ ಉಲ್ಲಂಘಿಸಿ ರಚನೆಯಾಗುತ್ತಿವೆ. ಇಂತಹ ಪ್ರಕ್ರಿಯೆಗಳ ವಿರುದ್ದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ಕಟ್ಟುನಿಟ್ಟಾಗಿ ಯಾವುದೇ ಆಮೀಷಕ್ಕೆ ಒಳಗಾಗದೆ ಊರಿನ ಆಸ್ತಿಪಾಸ್ತಿ ರಕ್ಷಣೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಸ್ಪತ್ರೆಗೆಂದು ಪರವಾನಗಿ ಪಡೆದು ಲೇಔಟ್ ಆಗಿ ಬದಲಾದ ಕ್ಯಾರವಾನ್ ಲೇಔಟ್ ಪ್ರಕರಣ ಸಂಬಂಧ ಅಕ್ರಮಕ್ಕೆ ಸಹಕರಿಸದ ಮುಖ್ಯಾಧಿಕಾರಿಯನ್ನು ಶಾಸಕರೇ ವರ್ಗಾವಣೆ ಗೊಳಿಸಿ ಆ ಸ್ಥಾನಕ್ಕೆ ತಮ್ಮ ಆಜ್ಞೆಯಂತೆ ಅಕ್ರಮಕ್ಕೆ ಸಹಕರಿಸುವ ವ್ಯಕ್ತಿಯನ್ನು ಹುಡುಕಿ ತಂದಿದ್ದಾರೆ ಎಂದು ಆರೋಪಿಸಿದ ಶಶಿಧರ್, ಊರಿನ ಹಿತ ಕಾಯಬೇಕಾದ ಶಾಸಕರು ಅಕ್ರಮಕ್ಕೆ ಸಾಥ್ ನೀಡುವ ಮೂಲಕ ಊರಿನ ಜನರಿಗೆ ದ್ರೋಹ ಎಸಗುತ್ತಿದ್ದಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್ ಮಾತನಾಡಿ, ಕುಶಾಲನಗರ ಉತ್ತಮ ನಗರವಾಗಿ ರೂಪುಗೊಳ್ಳಬೇಕಾದರೆ ನಿಷ್ಠಾವಂತ ಅಧಿಕಾರಿಗಳು ಅಗತ್ಯ. ಈಗಾಗಲೆ ಪಟ್ಟಣದಲ್ಲಿ ಅಕ್ರಮ ಲೇಔಟ್ ಗಳ ಹಾವಳಿ ಹೆಚ್ಚಾಗಿದೆ. ನಗರ ಯೋಜನಾ ಪ್ರಾಧಿಕಾರದ ನಿಯಮಾನುಸಾರ ಎಲ್ಲಾ ನಿರ್ಮಾಣ ಕಾಮಗಾರಿ ನಡೆಯುವುದು ಅಗತ್ಯ. ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ಕೂಡ ಇತ್ತೀಚೆಗೆ ಬದಲಾಗಿರುವುದು ವಿಷಾದಕರ ಸಂಗತಿ ಎಂದರು.
ಕುಶಾಲನಗರ ಪಪಂ ಸದಸ್ಯ ವಿ.ಎಸ್.ಆನಂದಕುಮಾರ್ ಮಾತನಾಡಿ, ಕಸ ವಿಲೇವಾರಿ ಘಟಕ, ವಸತಿ ರಹಿತರಿಗೆ ಸೂರು, ಬೀದಿಬದಿ ವ್ಯಾಪಾರಿಗಳ ಅಭ್ಯುದಯಕ್ಕೆ ಯೋಜನೆಗಳನ್ನು ರೂಪಿಸಿದಂತಹ ಅಧಿಕಾರಿಯನ್ನು ವರ್ಗಾಯಿಸಿರುವುದು ಸರಿಯಲ್ಲ ಎಂದರು.
ಡಿ.ಎಸ್. ಎಸ್ ಸಂಚಾಲಕ ಕೆ.ಬಿ.ರಾಜು ಮಾತನಾಡಿದರು.
ಪ್ರತಿಭಟನೆಯಲ್ಲಿ ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಸುಂದರೇಶ್, ವೇದಿಕೆ ಪ್ರಮುಖರಾದ ವಿ.ಜೆ.ನವೀನ್, ಚಂದ್ರು, ಎಸ್.ಎನ್.ರಾಜೇಂದ್ರ, ಎಂ.ಡಿ.ರಮೇಶ್, ಅಜಿತ್, ಶಿವಶಂಕರ್, ಆದಂ, ದೇವು, ನಂಜುಂಡಪ್ಪ ಮತ್ತಿತರರು ಇದ್ದರು.