ಸಭೆ

ಪ್ರಜ್ಞಾವಂತ ನಾಗರಿಕ ವೇದಿಕೆ ಸಭೆ:ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ವರ್ಗಾವಣೆಗೆ ಆಕ್ರೋಷ

ಕುಶಾಲನಗರ, ಅ 06: ಕೊಡಗು ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದಲ್ಲಿರುವ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಪರಾಭಾರೆ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿಗಳು ಹಾಗು ಜನಸ್ನೇಹಿಯಾಗಿ ಊರಿನ ಆಸ್ತಿಪಾಸ್ತಿಗಳ ಸಂರಕ್ಷಣೆ ಮಾಡುವಲ್ಲಿ ಪ್ರಾಮಾಣಿಕ‌ ಪ್ರಯತ್ನ ಮಾಡಿದ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಎಂಬವರ ವರ್ಗಾವಣೆಯನ್ನು ವಿರೋಧಿಸಿ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪಟ್ಟಣದ ಪ್ರಮುಖರನ್ನೊಳಗೊಂಡು ಪಕ್ಷಾತೀತವಾದ ಸಭೆ ನಡೆಯಿತು. ಈ ಸಂದರ್ಭ ಪ್ರಸ್ತಾವಿಕವಾಗಿ ಮಾತನಾಡಿದ ವೇದಿಕೆ ಅಧ್ಯಕ್ಷ ಶಶಿಧರ್,
ಊರಿನ ಅನೇಕ ಪ್ರಜ್ಣಾವಂತರ ಕೂಗು ಹಾಗು ಜನಸಾಮಾನ್ಯರ ಅಭಿಪ್ರಾಯ ದಿಕ್ಕರಿಸಿ ಕುಶಾಲನಗರದ ಅಪಾರ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಪರಾಭಾರೆ ಮಾಡಲಾಗಿದೆ. ಪಟ್ಟಣದ ಮುಖ್ಯ ರಸ್ತೆಯ ಕ್ಯಾರವನ್ ಬಡಾವಣೆಯನ್ನು ಊರಿನ ಒಂದಷ್ಟು ಪ್ರಜ್ಣಾವಂತರ ಹೋರಾಟದ ಫಲವಾಗಿ ಅನಧಿಕೃತ ವೆಂದು ದಾಖಲಿಸಲ್ಪಟ್ಟಿರುವ ಮೂಲಕ ಅನಿವಾರ್ಯವಾಗಿ ಪಂಚಾಯತಿ ಹೆಸರಿನಲ್ಲಿ ವಾಹನ ನಿಲ್ದಾಣ ಹಾಗು ಉದ್ಯಾನವನಕ್ಕೆ ಜಾಗ ಮೀಸಲಿಡಬೇಕೆಂಬ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಂತಾಗಿತ್ತು. ಆದರೆ ಇದೀಗ ಅದನ್ನು ನಿಷ್ಪಲಗೊಳಿಸುವ ವ್ಯವಸ್ಥಿತ ಷಡ್ಯಂತ್ರ ಸೇರಿದಂತೆ ಅನೇಕ ಅಕ್ರಮಗಳ ಸರಮಾಲೆಗೆ ಕುಶಾಲನಗರದ ಪ್ರಜ್ಞಾವಂತ ನಾಗರೀಕರು ಒಕ್ಕೊರಲಿನಿಂದ ಹೋರಾಟ ರೂಪಿಸಬೇಕಿದೆ. ಪಟ್ಟಣದ ವಿವಿಧೆಡೆಗಳಲ್ಲಿರುವ ಅನಧಿಕೃತ ಜಾಗವನ್ನು ಅಧಿಕೃತ ಗೊಳಿಸುವ ಒತ್ತಡಕ್ಕೆ ಮಣಿಯದಿದ್ದ ಏಕೈಕ ಕಾರಣಕ್ಕೆ ಪ್ರಾಮಾಣಿಕವಾದ ಕರ್ತವ್ಯ ನಿರ್ವಹಣೆಯೊಂದಿಗೆ ಜನಸ್ನೇಹಿಯಾಗಿದ್ದ ಪಂಚಾಯಿತಿ ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡಿರುವುದು ವ್ಯವಸ್ಥೆಯ ದುರಂತ ಎಂದು ಶಶಿಧರ್ ಹೇಳಿದರು.
ಇಂತಹ ಒಳ್ಳೆಯ ಅಧಿಕಾರಿಯ ಜಾಗಕ್ಕೆ ಹುಣಸೂರಿನಲ್ಲಿ ಕರ್ತವ್ಯ ಲೋಪ ಮಾಡುವ ಮೂಲಕ ಕಾನೂನಿನ ಶಿಕ್ಷೆಗಳಿಗೆ ಒಳಗಾಗಿದ್ದ ಅಧಿಕಾರಿಯೋರ್ವರನ್ನು ನೇಮಕ ಮಾಡಿರುವುದು ಸರಿಯಲ್ಲ.
ಸರ್ಕಾರಿ ಜಾಗವನ್ನು ನೇರವಾಗಿ ಪರಭಾರೆ ಮಾಡಿ‌ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ದಾಖಲೆ ಮಾಡಿ ಜೈಲುಪಾಲಾದ ವ್ಯಕ್ತಿ ಅಮಾನತ್ತಿನಿಂದ ವಿಮುಕ್ತಿ ಗೊಂಡ ನಂತರ ನೇರವಾಗಿ ಇಲ್ಲಿನ ಪಂಚಾಯಿತಿಗೆ ನಿಯುಕ್ತಿ ಗೊಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಶಿಧರ್ ಹೇಳಿದರು.
ಇಂತಹ ಕೆಟ್ಟ ಪರಂಪರೆ ಹೊಂದಿರುವವರನ್ನೆ ಹುಡುಕಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಿಗೆ ಕರೆತರುವ ಸ್ವಭಾವ ಬೆಳೆಸಿಕೊಂಡಿರುವ ಜಿಲ್ಲೆಯ ಜನಪ್ರತಿನಿಧಿಗಳ ವರ್ತನೆಯ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದು ಹೇಳಿದರು.
ಬಿ ಜೆ ಪಿ ಯಲ್ಲಿರುವ ಸಜ್ಜನ ಕಾರ್ಯಕರ್ತರ ವಿರೋಧದ ನಡುವೆ ಕೂಡ ಇಂಥ ನೇಮಕ‌ ನಡೆದಿದೆ.
ಹಲವು ಸುಧೀರ್ಘ ಹೋರಾಟಗಳ ಮೂಲಕ ಕಾಪಾಡಿಕೊಂಡು ಬಂದ ಹಲವು ಕೋಟಿಗಳ ಮೌಲ್ಯದ ಸರ್ಕಾರಿ ಆಸ್ತಿಪಾಸ್ತಿ, ಇನ್ನೂ ಇಂತಹ ಪರಭಾರೆ ಹಾಗು ನಿಷ್ಣಾತ ಅನುಭವಿ, ಭ್ರಷ್ಟ ಅಧಿಕಾರಿಯ ಮೂಲಕ ಪ್ರಭಾವಿ ಗಳ ಶ್ರೀಮಂತರ ರಾಜಕಾರಣಿಗಳ , ರಿಯಲ್ ಎಸ್ಟೇಟ್ ಲಾಬಿಗಳ ಪಾಲಾಗಿಸಲು ಹೊರಟ ಕ್ರಮದ ವಿರುದ್ಧ ಹೋರಾಟ ವಾಗಬೇಕಿದೆ.
ಬಹಿರಂಗವಾಗಿ ಅಕ್ರಮಕೋರರ ನೇಮಕಾತಿಯನ್ನು ಇಷ್ಟು ರಾಜರೋಷವಾಗಿ ಹಲವು ಸಂಘಸಂಸ್ಥೆಗಳ ಗಳ ವಿರೋಧದ ನಡುವೆ ಕೂಡ ವರ್ಗಾವಣೆ ಮಾಡೋದು ಊರಿನ ನಾಗರಿಕರ ಮೇಲಿನ ನೇರ ದಾಳಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್ ಹೇಳಿದರು.
ಇಂತಹ ಕಡುಭ್ರಷ್ಟರ ನೇಮಕಾತಿ ಮಾಡುವ ಮೂಲಕ ಊರಿನಲ್ಲೂ ಅಕ್ರಮ ಎಸಗಲು‌ ರಹದಾರಿ ಮಾಡಿಕೊಡುವ ಭಂಡತನದ ವಿರುದ್ದ ಹೋರಾಟ ರೂಪಿಸಬೇಕಿದೆ ಎಂದು ಕರವೇ ಅಧ್ಯಕ್ಷ ವೆಂಕಟೇಶ್ ಪೂಜಾರಿ ಹೇಳಿದರು.
ಊರಿನ ಹಿತಾಸಕ್ತಿಗೆ ಮಾರಕವಾಗಿ ಇಂತಹ ಅಕ್ರಮ ಎಸಗಿದರೆ ಸಹಿಸಲಾಗದು ಎಂದು ಸಂದೇಶ ನೀಡಲು ಒಂದು ಚಳುವಳಿ ಅಗತ್ಯ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಬಿ.ರಾಜು ಹೇಳಿದರು.
ಇಂತಹ ಹೋರಾಟಗಳು ಪಕ್ಷಾತೀತವಾಗಿ ಹಾಗು ಜಾತ್ಯಾತೀತ ವಾಗಿ ಮಾಡುವ ಮೂಲಕ ಸಮಗ್ರ ಊರಿನ‌ ಹಿತಚಿಂತಕರ ಮಂದಿಯ ವಿರೋಧವಿದೆ ಎಂಬ ಸಂದೇಶ ರವಾನೆಯಾಗಬೇಕಿದೆ ಎಂದು ಕುಡಾ ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್ ಹೇಳಿದರು.
ಸಭೆಯಲ್ಲಿ ಕುಶಾಲನಗರದ ವಿವಿಧ ಸಂಘಟನೆಗಳ ಪ್ರಮುಖರಾದ ರಾಯ್ ಡೇವಿಡ್, ಶಿವಶಂಕರ್, ಕೆ.ಎಸ್.ಮಹೇಶ್, ಎಂ.ಎನ್.ಚಂದ್ರಮೋಹನ್, ಕೆ.ಎಸ್.ಮೂರ್ತಿ, ಶೇಖರೇಗೌಡ, ನವೀನ್, ಕರೀಂ, ನಾಗೇಗೌಡ, ಎಂ.ಚಂದ್ರು, ಸುರೇಶ್ ಬಾಬು, ಮುಸ್ತಾಫ, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಎಸ್.ಆನಂದಕುಮಾರ್, ಎಂ.ಕೆ.ದಿನೇಶ್, ಪ್ರಮೋದ್ ಮುತ್ತಪ್ಪ, ಜಯಲಕ್ಷ್ಮಿ ಮೊದಲಾದವರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!