ಕುಶಾಲನಗರ ಅ02: ಗಿರಿಜನರು ತಮ್ಮ ಕೃಷಿ ಚಟುವಟಿಕೆಯೊಂದಿಗೆ ಜೇನು ಸಾಕಾಣಿಕೆಯನ್ನು ಕೈಗೊಳ್ಳುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿಎನ್. ನಿರಂಜನ್ ಮೂರ್ತಿ ಹೇಳಿದರು. ಅರಣ್ಯ ಇಲಾಖೆ ವತಿಯಿಂದ ಸೋಮವಾರಪೇಟೆ ಅರಣ್ಯ ವ್ಯಾಪ್ತಿಯಲ್ಲಿ ಬರುವ ಆದಿವಾಸಿ ಸಮುದಾಯ ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಗೋಣಿಮರೂರು ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜೇನು ಸಾಕಾಣಿಕೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಜೇನು ಸಾಕಾಣಿಕೆಯನ್ನು ಆದಾಯದ ಮೂಲವಾಗಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಜೇನು ಅಭಿವೃದ್ಧಿ ಯೋಜನೆ ಅಡಿಯಲ್ಲಿ ನೂರಾರು ಜನ ತರಬೇತಿ ಪಡೆದು ಜೀವನ ಹಸನಾಗಿಸಿಕೊಂಡಿದ್ದಾರೆ ಎಂದರು. ಜೇನು ಸಂಶೋಧನಾ ಸಂಪನ್ಮೂಲ ವ್ಯಕ್ತಿ ಅಪೂರ್ವ ಅವರು ಜೇನು ಸಾಕಾಣಿಕೆ ಅವುಗಳ ಪಾಲನೆ,ಪೋಷಣೆ ಹಾಗೂ ಇಳುವರಿ ಮತ್ತು ಆದಾಯದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಈ ಸಂದರ್ಭ ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್,ವಲಯ ಅರಣ್ಯಾಧಿಕಾರಿ ಎಚ್.ಪಿ.ಚೇತನ್,ಉಪ ವಲಯ ಅರಣ್ಯಾಧಿಕಾರಿಗಳಾದ ರಾಕೇಶ್, ಎಚ್.ಎಂ.ಸತೀಶ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗೋವಿಂದ ರಾಜ್ ನಿರೂಪಿಸಿದರು.
Back to top button
error: Content is protected !!