ಕಾರ್ಯಕ್ರಮ

ಕುಶಾಲನಗರ ತಾ ಕಸಾಪ: ಬಸವನಹಳ್ಳಿಯಲ್ಲಿ ” ವಚನ ಸಾಹಿತ್ಯ ಹಾಗು ಸಾಮಾಜಿಕ ಬದ್ಧತೆ ” ವಿಚಾರ ಸಂಕಿರಣ

ಕುಶಾಲನಗರ, ಸೆ 21:ವಚನಸಾಹಿತ್ಯ ಯಾವುದೇ ಕಥೆ, ಕಾವ್ಯ ನಾಟಕಗಳ ಸರಮಾಲೆಯಲ್ಲ. ಯಾವುದೋ ರಾಜಮಹಾರಾಜರನ್ನು ತೃಪ್ತಿಪಡಿಸಲು ರಚಿಸಿದ ಆಸ್ಥಾನ ಸಾಹಿತ್ಯವಲ್ಲ.

ವಿದ್ವಜ್ಜನರನ್ನು ಸುಪ್ರೀತಗೊಳಿಸಲು ಸೃಷ್ಟಿಸಿದ
ಸಾಹಿತ್ಯವೂ ಅಲ್ಲ. ಅದು ಶರಣರ, ಅನುಭಾವಿಗಳ ಹಾಗು ದಾರಗಶನಿಕರ ಅಂತರಂಗದ ಅಭಿವ್ಯಕ್ತಿ.
ಶುದ್ಧ ಭಾವನೆಗಳ ರಸಗಂಗೆ. ಪವಿತ್ರ ಭಾವನೆಗಳ ಜಲಧಾರೆ ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ” ವಚನ ಸಾಹಿತ್ಯ ಹಾಗು ಸಾಮಾಜಿಕ ಬದ್ಧತೆ ” ವಿಚಾತ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವರ್ಣಭೇದ, ವರ್ಗಭೇದ ಹಾಗು ಲಿಂಗಭೇದವಿಲ್ಲದ ಸಮಾನತೆಯ ಸುಂದರ ಸಮಾಜದ ಪ್ರತಿಪಾದನೆಗೆ ವಚನ ಸಾಹಿತ್ಯ ಒಂದು ಅತ್ಯಂತ ಪ್ರಭಾವಿ ಅಭಿವ್ಯಕ್ತಿ ಸಾಧನ. ಸಾಹಿತ್ಯ ಶರಣರು ಏಕಾಂತದಲ್ಲಿ ನಡೆಸಿದ ಸಾಹಿತ್ಯ ರಚನೆಯಾಗಲಿಲ್ಲ. ಸಮಾಜದ ನಡುವೆಯೇ ಇದ್ದುಕೊಂಡು ಅವರ ನೋವು ನಲಿವುಗಳನ್ನು ಅಂದು ಸಮಾಜದಲ್ಲಿದ್ದ ಅಂಕು ಡೊಂಕುಗಳನ್ನು ಅರ್ಥೈಸಿಕೊಂಡು ಸಮ ಸಮಾಜಕ್ಕೆ ನೀಡಿದ ಧಾರ್ಮಿಕ ಹಾಗು ಸಾಮಾಜಿಕವಾದ ನೀತಿ ಸಂಹಿತೆ ಎಂದು ಸೋಮಶೇಖರ್ ಹೇಳಿದರು.
ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ,
ವ್ಯಕ್ತಿ ಶುದ್ದಿಯೊಂದಿಗೆ ಸಮಾಜದ ಶುದ್ದಿಯನ್ನು ಸಾಧಿಸಬೇಕೆಂದು ಶರಣರು ಅಂದು ಜಗತ್ತಿಗೆ ನೀಡಿದ ಒಂದು ಮಾನವ ಸಂವಿಧಾನವೇ ವಚನ ಸಾಹಿತ್ಯ ಎಂದರು.
ಪ್ರಾಸ್ತಾವಿಕ ನುಡಿಗಳಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ಜಡ್ಡುಗಟ್ಟಿದ ಸಮಾಜದ ಅರ್ಥರಹಿತ ಆಚರಣೆಗಳಿಗೆ ಚಿಂತನಶೀಲ ಮೌಲ್ಯದ ಸ್ಪರ್ಶ ನೀಡುವ ಮೂಲಕ ವಚನ ಸಾಹಿತ್ಯದ ಮೂಲ ಆಶಯವೇ ತಮ್ಮ ಆತ್ಮಕಲ್ಯಾಣ ಹಾಗು ಲೋಕ ಕಲ್ಯಾಣ ಎಂದರು.
ರಾಜ್ಯ ಉಚ್ಛನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ಮಾತನಾಡಿದರು.
ಜಿಲ್ಲಾ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಕೋಶಾಧಿಕಾರಿ ಮುರುವಂಡ ಜೋಯಪ್ಪ, ನಿರ್ದೇಶಕರಾದ ಫ್ಯಾನ್ಸಿ ಮುತ್ತಣ್ಣ, ಮಂಜುನಾಥ್, ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಕೆ‌.ವಿ.ಉಮೇಶ್, ನಿರ್ದೇಶಕರಾದ ಟಿ.ವಿ‌.ಶೈಲ, ಹೇಮಲತ, ಲೀಲಾಕುಮಾರಿ, ಕಾಳಪ್ಪ, ಕಾಮಾಕ್ಷಿ, ಬಸವನಹಳ್ಳಿ ಶಾಲೆಯ ಪ್ರಾಂಶುಪಾಲೆ ಶ್ರೀದೇವಿ ಸ್ವಾಗತಿಸಿದರು. ಶಿಕ್ಷಕ ರಮೇಶ್ ನಿರೂಪಿಸಿದರು.
ಇದೇ ಸಂದರ್ಭ ತಾಲ್ಲೂಕು ಕಸಾಪ ವತಿಯಿಂದ ಡಾ.ಸೋಮಶೇಖರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿದ್ದ ಜಿಲ್ಲಾಧಿಕಾರಿ ಡಾ.ಸತೀಶ್ ಹಾಗು ಡಾ.ಸೋಮಶೇಖರ್ ಅವರೊಂದಿಗೆ ಶಾಲಾ ವಿದ್ಯಾರ್ಥಿಗಳು, ಐಎಎಸ್ ಓದುವುದು ಹೇಗೆ ? ವಚನ ಸಾಹಿತ್ಯ ಸಾಮಾಜಿಕವಾಗಿ ಅಷ್ಟೊಂದು ಪ್ರಭಾವ ಬೀರಲು ಕಾರಣವೇನು ? ಗಡಿ ಅಭಿವೃದ್ದಿ ಪ್ರಾಧಿಕಾರದ ಕೆಲಸ ಕಾರ್ಯಗಳೇನು ? ಬೆಳಗಾವಿಯಲ್ಲಿ ಕನ್ನಡ ಭಾಷೆ ಸಂವರ್ಧನೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ? ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ಸೋಮಶೇಖರ್ ಉತ್ತರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!