ಮಡಿಕೇರಿಯಲ್ಲಿ ನಡೆದ ಕೊಡಗು ಬಚಾವೋ ಆಂದೋಲನ: ಮತೀಯವಾದದ ಆತಂಕ
ಕುಶಾಲನಗರ, ಸೆ 18:ಮತೀಯವಾದ ಮತ್ತು ಕೆಟ್ಟ ರಾಜಕಾರಣದಿಂದ ಕೊಡಗನ್ನು ಬಚಾವ್ ಮಾಡಬೇಕಾಗಿದೆ ಎಂದು ಸಾಹಿತಿ ಡಾ.ಜೆ. ಸೋಮಣ್ಣ ಆತಂಕ ವ್ಯಕ್ತಪಡಿಸಿದರು.
ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ನಡೆದ ಕೊಡಗು ಬಚಾವ್ ಆಂದೋಲನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, 25 ವರ್ಷಗಳಿಂದ ಒಂದು ಕ್ಷೇತ್ರವನ್ನು ಪ್ರತಿನಿಧಿಸಿದವರಿಂದ ಜಿಲ್ಲೆ ಅಭಿವೃದ್ಧಿ ಆಗದೇ ಇರುವಾಗ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದರೆ, ವ್ಯವಸ್ಥೆಯಲ್ಲಿ ಆಗುತ್ತಿರುವ ಕೆಡಕುಗಳನ್ನು ನಾವು ಬೆಂಬಲಿಸುತ್ತಿದ್ದೇವೆ ಎಂದೇ ಅರ್ಥ ಎಂದರು.
ವೈವಿಧ್ಯಮಯವಾದ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕೊಡಗು ಇತ್ತೀಚೆಗೆ ಕೋಮು ಸಂಘರ್ಷಕ್ಕೆ ಸಿಲುಕಿ ನಲುಗಿ ಹೋಗುತ್ತಿದೆ. ಕಳೆದ 25 ವರ್ಷಗಳಲ್ಲಿ ಒಂದೇ ಒಂದು ಬಾರಿಯೂ ಗಿರಿಜನರ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಿಲ್ಲ. ಬದಲಾಗಿ ಅಧಿಕಾರಕ್ಕಾಗಿ ಜನರ ಮನಸ್ಸುಗಳನ್ನು ಒಡೆದು ರಾಜಕೀಯ ಮಾಡಲಾಗುತ್ತಿದೆ ಎಂದರು.
ಯುವಜನಾಂಗವು ಇತಿಹಾಸ ಅರಿಯದಂತೆ ಮಾಡಿ ಅವರಿಗೆ ಧರ್ಮದ ಅಮಲನ್ನು ತುಂಬಿ ದಿಕ್ಕು ತಪ್ಪಿಸಲಾಗುತ್ತಿದೆ. ಹೀಗಾಗಿ ಯುವಜನರು ದಾರಿ ತಪ್ಪುತ್ತಿದ್ದಾರೆ. ಶ್ರೀಲಂಕಾವನ್ನು ಕಟ್ಟಿದವರು ಮುಸಲ್ಮಾನರು ಆದರೆ ಧರ್ಮದ ಹಿಂದೆ ಬಿದ್ದು ಇಂದು ಶ್ರೀಲಂಕಾ ನಾಶವಾಗುವ ಸ್ಥಿತಿ ಬಂದು ತಲುಪಿದೆ ಎಂದರು.
ಬ್ರಿಟೀಷರು ಕೂಡ ಇಂತಹದ್ದೇ ಒಡೆದಾಳುವ ನೀತಿಯನ್ನು ಪಾಲಿಸಿ ದೇಶವನ್ನು 300 ವರ್ಷಗಳ ಕಾಲ ಆಳ್ವಿಕೆ ಮಾಡಿದರು. ಇಂದು ರಾಷ್ಟ್ರಭಕ್ತಿಯನ್ನು ಬಾಯಿ ಮಾತಿನಲ್ಲಿ ಹೇಳುತ್ತಾ ದೇಶವನ್ನು ಒಡೆದಾಳುವ ಕೆಲಸ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಬಚಾವೋ ವೇದಿಕೆ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು, ಯೋಧರು, ರೈತರ ನಾಡು ಕೊಡಗಿನಲ್ಲಿ ರೈತರು, ಕಾಫಿ ಬೆಳೆಗಾರರು ತಮ್ಮ ಸಮಸ್ಯೆಗಳ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಅವನ ಕೂಗು ಬೆಂಗಳೂರಿಗೆ ಅಥವಾ ದೆಹಲಿಗೆ ಕೇಳುವುದಿಲ್ಲ. ಜಿಲ್ಲೆಯಿಂದ ನಿರಂತರವಾಗಿ ಒಂದೇ ಪಕ್ಷದ ಶಾಸಕರು ನಾಲ್ಕೈದು ಬಾರಿಯಿಂದ ಗೆದ್ದು ವಿಧಾನಸಭೆಗೆ ಹೋದರು, ಸಚಿವಸ್ಥಾನ ಸಿಗುತ್ತಿಲ್ಲ. ಸಚಿವ ಸ್ಥಾನ ಸಿಗದಿದ್ದರೆ ನಮ್ಮ ಸಮಸ್ಯೆಗಳು ಅಲ್ಲಿ ಚರ್ಚೆಗೆ ಬರುವುದಿಲ್ಲ. ಸಂಸತ್ತಿನ ವಿಷಯದಲ್ಲೂ ಪರಿಸ್ಥಿತಿ ಬೇರೆಯಾಗಿಲ್ಲ. ಸಿದ್ದರಾಮಯ್ಯನವರಿಗೆ ಮೊಟ್ಟೆ ಎಸೆದಿದ್ದು ಸರಿಯೋ, ತಪ್ಪೋ ಎಂದು ಚರ್ಚೆ ಆಗುತ್ತಿದೆ. ಆದರೆ ಇದು ನಮ್ಮ ಜಿಲ್ಲೆಯ 95 ರಷ್ಟು ಜನರಿಗೆ ಬೇಕಾಗಿಲ್ಲ ಎಂದರು.
ಪೊನ್ನಂಪೇಟೆ ರಾಮಕೃಷ್ಣಾಶ್ರಮದ ಧರ್ಮಾನಂದ ಜಿ ಮಾತನಾಡಿ, ಊಟದಲ್ಲಿ ಬೇರೆ ಬೇರೆ ಪದಾರ್ಥಗಳಿದ್ದರೆ ಮಾತ್ರವೇ ಊಟ ಪರಿಪೂರ್ಣ ಆಗುತ್ತದೆ. ಆದ್ದರಿಂದ ದೇಶದಲ್ಲಿ ಎಲ್ಲಾ ಧರ್ಮಗಳಿದ್ದರೆ ಮಾತ್ರವೇ ಶಾಂತಿ ಇರಲು ಸಾಧ್ಯ. ನನ್ನ ಧರ್ಮ ಶ್ರೇಷ್ಠ ಎಂದು ಅದನ್ನೇ ಬಳಸಿಕೊಂಡು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಮಡಿಕೇರಿಯ ಇಸ್ಲಾಂ ಧರ್ಮಗುರುಗಳಾದ
ಶಾಫಿ ಸಅದಿ ಅವರು ಮಾತನಾಡಿ, ಇಂದು ಜಾತಿ ಧರ್ಮ ಪಂಗಡಗಳ ನಡುವೆ ಕಂದಕ ಸೃಷ್ಟಿಸಿ ವೈಷಮ್ಯ ಬೆಳೆಸಲಾಗುತ್ತಿದೆ. ಈ ದೇಶ ಧರ್ಮ ರಾಜಕೀಯದ ಆಧಾರದಲ್ಲಿ ಹಾಳಾಗುವುದನ್ನು ತಪ್ಪಿಸಬೇಕಾಗಿದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಮಾತನಾಡಿ, ಇಂದು ಒಬ್ಬ ಯೋಧ ಹುತಾತ್ಮನಾದರೆ ಆತನ ಪಾರ್ಥೀವ ಶರೀರವನ್ನು ಆಯಾಯ ಧರ್ಮದವರು ಹೋಗಿ ಬರಮಾಡಿಕೊಳ್ಳುವ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತೀಧರ್ಮದ ಗುರುಗಳು ಇಂದು ದೇಶದ ಶಾಂತಿ ಕಾಪಾಡಲು ಮಠ, ಮಸೀದಿ ಚರ್ಚ್ ಗಳಿಂದ ಹೊರಗೆ ಬಂದು ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದರು.
ಮುಖ್ಯ ಭಾಷಣಗಾರರಾಗಿ ಎಫ್‍ಎಂಸಿ ಕಾಲೇಜಿನ ಪ್ರಾಚಾರ್ಯ ಶ್ರೀಧರ್ ಹೆಗಡೆ ಅವರು ಮಾತನಾಡಿದರು.
ಇದೇ ಸಂದರ್ಭ ಕೊಡಗು ರಕ್ಷಣೆ ಮಾಡುವುದಕ್ಕೆ ಕಠಿಬದ್ಧರಾಗುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಫಾದರ್ ಜಾರ್ಜ್ ದೀಪಕ್, ಎಸ್‍ಕೆಎಸ್‍ಎಸ್‍ಎಫ್‍ನ ತಬ್ಲಿಕ್ ಧಾರಿಮಿ ಇದ್ದರು. ಮೋಹನ್ ಮೌರ್ಯ ಸ್ವಾಗತಿಸಿ, ಇಸಾಕ್ ಖಾನ್ ನಿರೂಪಿಸಿದರು.