ತಮಿಳುನಾಡು: ದಲಿತ ಮಕ್ಕಳಿಗೆ ಮಿಠಾಯಿ ಮಾರಲು ನಿರಾಕರಣೆ – ಇಬ್ಬರ ಬಂಧನ
ಕುಶಾಲನಗರ, ಸೆ 18 ದಲಿತ ಸಮುದಾಯದ ಮಕ್ಕಳಿಗೆ ಮಿಠಾಯಿ ಮಾರಾಟ ಮಾಡಲು ನಿರಾಕರಿಸಿದ ಅಂಗಡಿ ಮಾಲಿಕನೊಬ್ಬನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಬ್ಬರನ್ನು ಶನಿವಾರ ತಮಿಳುನಾಡಿನ ತೆಂಕಾಶಿ ಜಿಲ್ಲೆಯ ಪಂಚಕುಳಂ ಎಂಬಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ
ತೆಂಕಾಶಿಯ ಪಂಚಕುಳಂ ಶಂಕರನ್ ದೇವಾಲಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ವೈರಲ್ ಆದ ವೀಡಿಯೊದಲ್ಲಿ, ಎಸ್ ಮಹೇಶ್ವರನ್ ಎಂಬ ಅಂಗಡಿಯಾತನು “ನಿಮ್ಮ ಸಮುದಾಯದ ವ್ಯಕ್ತಿಗಳಿಗೆ ಏನನ್ನೂ ಮಾರಾಟ ಮಾಡದಂತೆ ಗ್ರಾಮ ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಮಕ್ಕಳಿಗೆ ಹೇಳುತ್ತಿರುವುದು ದಾಖಲಾಗಿದೆ.
“ಇಲ್ಲಿಂದ ಯಾವುದೇ ಮಿಠಾಯಿ ಖರೀದಿಸಬೇಡಿ. ಶಾಲೆಗೆ ಹೋಗಿ. ಇಲ್ಲಿನ ಯಾವುದೇ ಅಂಗಡಿಗಳಿಂದ ನೀವು ಯಾವುದೇ ಸಿಹಿತಿಂಡಿಗಳನ್ನು ಖರೀದಿಸಬಾರದು. ಅಂಗಡಿಯವರು ತಿಂಡಿ ಕೊಡುತ್ತಿಲ್ಲ ಎಂದು ಮನೆ ಮಂದಿಗೆ ಹೋಗಿ ಹೇಳಿ. ನಾನು ಏನನ್ನೂ ನೀಡುವುದಿಲ್ಲ, ನೀಡದಂತೆ ನಿರ್ಬಂಧವಿದೆ” ಎಂದು ಅಂಗಡಿಯಾತ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಯಾವ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಮಕ್ಕಳು ಅಂಗಡಿಯವನನ್ನು ಕೇಳಿದಾಗ, “ಗ್ರಾಮ ಸಭೆಯು ನಿಮ್ಮ ಬೀದಿಯ ಜನರಿಗೆ ತಿಂಡಿಗಳನ್ನು ನೀಡದಿರಲು ನಿರ್ಧರಿಸಿದೆ. ಆದ್ದರಿಂದ ಹೋಗಿ”ಎಂದು ಹೇಳಿ ಮಕ್ಕಳನ್ನು ಕಳಿಸಿದ್ದಾನೆ.
ತೆಂಕಾಶಿ ಜಿಲ್ಲಾ ಪೋಲೀಸರು ಈ ಕುರಿತು ಶನಿವಾರದಂದು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಸ್ವಘೋಷಿತ ಮೇಲ್ಜಾತಿ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಕೆಲವು ಯುವಕರಿಗೆ ನಡೆದಿರುವ ಘರ್ಷಣೆಯೇ ಇದಕ್ಕೆಲ್ಲಾ ಕಾರಣ ಎಂದು ವರದಿಯಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಡಿಯಲ್ಲಿ ಇತರೆ ಜಾತಿಯ ಕೆಲ ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿರುದ್ಧ ಗುಂಪಿನ ದೂರಿನ ಆಧಾರದ ಮೇಲೆ ಅವರು ಕೆಲವು ಪರಿಶಿಷ್ಟ ಜಾತಿಯ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘರ್ಷಣೆಯ ನಂತರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಕೆ ರಾಮಚಂದ್ರನ್ ಅಲಿಯಾಸ್ ಮೂರ್ತಿ ಎಂಬ ಯುವಕನಿಗೆ ಸಶಸ್ತ್ರ ಪಡೆಗಳ ನೇಮಕಾತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ನಡುವೆ ಶಾಂತಿ ಮರುಸ್ಥಾಪಿಸಲು ಮತ್ತು ದೂರುಗಳನ್ನು ಹಿಂಪಡೆಯಲು ಸಭೆಯನ್ನು ಆಯೋಜಿಸಲಾಯಿತು. ಆದರೆ, ಸಭೆಯು ವಿಫಲವಾಗಿದ್ದು, ಸಭೆಯಲ್ಲಿ ಪರಿಶಿಷ್ಟ ಜಾತಿಯ ಸದಸ್ಯರಿಗೆ ವಸ್ತುಗಳನ್ನು ಮಾರಾಟ ಮಾಡದಿರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
NC: scroll.in