ಮನವಿ
ಪುರಸಭೆಗೆ ಮುಳ್ಳುಸೋಗೆ ಗ್ರಾಪಂ ಸೇರಿಸಿ: ಕೆ.ಪಿ.ಚಂದ್ರಕಲಾ ನೇತೃತ್ವದಲ್ಲಿ ಮನವಿ
ಕುಶಾಲನಗರ, ಸೆ 15: ಮುಳ್ಳುಸೋಗೆ ಗ್ರಾಪಂ ಸೇರಿಸಿಕೊಂಡು ಕುಶಾಲನಗರ ಪುರಸಭೆ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಗ್ರಾಮದ ಪ್ರಮುಖರು ಕೆ.ಪಿ.ಚಂದ್ರಕಲಾ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಸಂಪೂರ್ಣ ಮುಳ್ಳುಸೋಗೆ ಸೇರಿಸಿಕೊಂಡು ಕುಶಾಲನಗರವನ್ನು ಪುರಸಭೆ ಮಾಡುವ ಸರ್ಕಾರ ಆದೇಶ ಹೊರಡಿಸಿದಾಗ ಮುಳ್ಳುಸೋಗೆ ಗ್ರಾಮಸ್ಥರು ಪಟ್ಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು. ನಂತರ ಬೆಳವಣಿಗೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರು ಸಭೆ ನಡೆಸಿ ತಮ್ಮ ಅಧಿಕಾರಾವಧಿ ಮುಗಿಯುವವರೆಗೂ ಪುರಸಭೆಗೆ ತಡೆಯಾಜ್ಞೆ ನೀಡಬೇಕೆಂದು ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಕಚೇರಿಗೆ ಮನವಿ ಸಲ್ಲಿಸಿರುವ ವಿಚಾರ ತಿಳಿದುಬಂದಿತ್ತು.
ಈ ಬೆಳವಣಿಗೆ ನಂತರ ಕುಶಾಲನಗರ ಪುರಸಭೆಯನ್ನಾಗಿ ಮಾಡಲು ಜನತಾ ಕಾಲೋನಿಯ ಸ್ವಲ್ಪ ಭಾಗ ಮತ್ತು ಗುಡ್ಡೆಹೊಸೂರು ಗ್ರಾಮದ ಕೆಲವು ಭಾಗಗಳನ್ನು ಸೇರಿಸಿಕೊಂಡು ಅನುಷ್ಠಾನಕ್ಕೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಮುಳ್ಳುಸೋಗೆ ಗ್ರಾಮಸ್ಥರನ್ನು ಜಾಗೃತಗೊಳಿಸಲು ಮನೆ ಮನೆಗೆ ಕರಪತ್ರಗಳನ್ನು ಹಂಚಿ ಮುಳ್ಳುಸೋಗೆ ಪಂಚಾಯಿತಿಯ ತುರ್ತು ಸಭೆ ಕರೆಯಿಸಿ ಎಲ್ಲಾ 23 ಸದಸ್ಯರು ಹೊಸದಾಗಿ ಠರಾವು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ತಿಳಿಸಿದ್ದಾರೆ.
ಈಗಾಗಲೇ ಶಾಸಕರಿಗೆ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ. ಶುಕ್ರವಾರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗೆ ನಮ್ಮ ಮನವಿ ಸಲ್ಲಿಸಲಿದ್ದು,
ಕೂಡಲೇ ಹೊಸ ಠಾರವುನೊಂದಿಗೆ ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಕಚೇರಿಗೆ ಅಪಿಡೇವಿಟ್ ಸಲ್ಲಿಸಿ ಪುರಸಭೆಗೆ ಇರುವ ತಡೆಯನ್ನು ನಿವಾರಿಸಬೇಕೆಂದು ಕೋರಿದರು.
ಗ್ರಾಮದ ಪ್ರಮುಖರಾದ ಎಂ.ಎಂ.ಪ್ರಕಾಶ್, ದೊರೆ ಗಣೇಶ್, ಎಂ.ವಿ.ಹರೀಶ್, ಆರ್.ಮಂಜುನಾಥ್, ನವೀನ್.ವಿ.ಜೆ ಮತ್ತು ಕುಶಾಲನಗರ ಪಪಂ ಸದಸ್ಯ ಶೇಖ್ ಕಲಿಮುಲ್ಲ ಇದ್ದರು.