ಕುಶಾಲನಗರ, ಸೆ 04: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಸಂಘದ ವತಿಯಿಂದ ಈಗಾಗಲೇ ಸುಂಟಿಕೊಪ್ಪದಲ್ಲಿ ಶಾಖೆಯನ್ನು ತೆರೆದು ಸಾರ್ವಜನಿಕರಿಗೆ ಸೇವೆಯನ್ನು ನೀಡಲಾಗುತ್ತಿದೆ.
ಮುಂದಿನ ಸಾಲಿನಿಂದ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕೇಂದ್ರ, ಬೈಲಕೊಪ್ಪ ಹಾಗು ಕೊಪ್ಪ ವ್ಯಾಪ್ತಿಗಳನ್ನು ಸೇರಿಸಿಕೊಂಡು ಮತ್ತೊಂದು ಶಾಖೆಯನ್ನು ತೆರೆಯಲು ಚಿಂತನೆ ನಡೆದಿದೆ ಎಂದು ಸಭಾಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು.
ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಹಾವಳಿಯಿಂದಾಗಿ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದುದನ್ನು ಕಂಡು ಅವರಿಂದ ಆ ವ್ಯವಸ್ಥೆಯನ್ನು ತಪ್ಪಿಸಲು ಈ ಸಂಘವನ್ನು ಆರಂಭಿಸಲಾಯಿತು. ಇದೀಗ ನಮ್ಮ ಸಂಘದ ಸೇವೆ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಕೆಳಹಂತದ ಮಂದಿಗೆ ತಲುಪುತ್ತಿದೆ. ಇದರಿಂದಾಗಿ ನಮಗೆ ಆತ್ಮತೃಪ್ತಿ ಇದೆ ಎಂದು ಶರವಣಕುಮಾರ್ ಹೇಳಿದರು. ಕಳೆದ 18 ವರ್ಷಗಳ ಹಿಂದೆ ಕೇವಲ 3.25 ಲಕ್ಷ ಬಂಡವಾಳದೊಂದಿಗೆ ಆರಂಭಿಸಿದ ಸಂಘ ಪ್ರಸಕ್ತ ಸಾಲಿನಲ್ಲಿ
243 ಕೋಟಿ ರೂಗಳ ಹಣಕಾಸು ವಹಿವಾಟು ನಡೆಸಿದ್ದು ಕಳೆದ ಸಾಲಿನಲ್ಲಿ 1.10 ಕೋಟಿ ರೂ ಲಾಭವನ್ನು ಗಳಿಸಲಾಗಿದೆ. ಈ ಲಾಭಾಂಶದಲ್ಲಿ ಸದಸ್ಯರಿಗೆ ಶೇ. 18 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಘದ ವತಿಯಿಂದ ಈ ಬಾರಿ ಪರಿಸರ ಕಾಳಜಿಯಿಂದಾಗಿ ಆಯ್ದ ಕೆಲವು ಬಡಾವಣೆಗಳಲ್ಲಿ ಪರಿಸರ ಸ್ನೇಹಿ ಗಿಡ ಮರಗಳನ್ನು ನೆಟ್ಟು ಬೆಳೆಸುವ ಯೋಜನೆ ಹೊಂದಿರುವ ಬಗ್ಗೆ ಶರವಣಕುಮಾರ್ ಹೇಳಿದರು.
ಇದೇ ಸಂದರ್ಭ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಎಂ.ಎಂ.ಶಾಹೀರ್, ನಿರ್ದೇಶಕರಾದ ಶಿವಪ್ರಕಾಶ್, ಬಿ.ರಾಮಕೃಷ್ಣಯ್ಯ, ಕೆ.ಎಸ್.ಮಹೇಶ್, ಎಂ.ವಿ.ನಾರಾಯಣ, ಜಗದೀಶ್, ಕೆ.ಪಿ.ಶರತ್, ಎಲ್.ನವೀನ್, ವಿ.ಸಿ. ಅಮೃತ್, ಕೆ.ಸುರೇಶ್ ಕುಮಾರ್, ಕವಿತಾ ಮೋಹನ್, ಟಿ.ಆರ್.ರೇಖಾ, ಆರ್.ಕೆ.ನಾಗೇಂದ್ರ, ಲೆಕ್ಕಪರಿಶೋಧಕ ಡಿ.ಎನ್.ಚಂದ್ರಶೇಖರ್, ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ.ಡಿ.ಶ್ರೀಜೇಶ್, ವ್ಯವಸ್ಥಾಪಕ ರಾಜಾ, ಲೆಕ್ಕಿಗರಾದ ಬೊಳ್ಳಮ್ಮ ಮೊದಲಾದವರಿದ್ದರು.
Back to top button
error: Content is protected !!