ಪ್ರಕಟಣೆ
ನಿಷೇದಾಜ್ಞೆಯಿಂದ ಜನಸಾಮಾನ್ಯರಿಗೆ ಅನಾನುಕೂಲ: ಬಿ.ಎಸ್.ಅನಂತಕುಮಾರ್ ಖಂಡನೆ
ಕೊಡಗು ಜಿಲ್ಲಾಡಳಿತ, ಪೊಲೀಸ್ ಇಲಾಖೆ ವೈಫಲ್ಯವೇ ನೇರ ಕಾರಣ
ಕುಶಾಲನಗರ, ಆ 25: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಸಿದ್ದರಾಮಯ್ಯನವರು ಕೊಡಗಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಬಿಜೆಪಿ ಮತ್ತು ಸಂಘ ಪರಿವಾರದ ಕಪ್ಪುಬಾವುಟ ಪ್ರದರ್ಶನ ಮತ್ತು ಮೊಟ್ಟೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನಾದ್ಯಂತ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಹೇರಿದ್ದು ಮಧ್ಯಮ ಮತ್ತು ಬಡವರ್ಗದವರು ಪರಿತಪಿಸುವಂತಾಗಿದೆ. ಗೌರಿ ಗಣೇಶ ಚತುರ್ಥಿ ಹಬ್ಬದ ತಯಾರಿಯಲ್ಲಿ ತೊಡಗಿಸಿಕೊಳ್ಳಬೇಕಾದ ಜನಸಾಮಾನ್ಯರು ಹೊರಗಡೆ ತಿರುಗಾಡಲು ಭಯ ಪಡಬೇಕಾಗಿದೆ.ಪ್ರವಾಸೋದ್ಯಮವನ್ನು ಅವಲಂಬಿತ ಸಂಸಾರಗಳು ಕೊಡಗಿನಲ್ಲಿ ಬಹಳಷ್ಟಿದ್ದು ಪ್ರವಾಸಿಗರು ಕೊಡಗಿನ ಕಡೆ ಮುಖ ಮಾಡದೇ ಇರುವುದರಿಂದ ಅಂಗಡಿ ಮುಗ್ಗಟ್ಟುಗಳು, ಹೋಟೆಲ್ ಗಳು, ಆಟೋರಿಕ್ಷಾ, ಮ್ಯಾಕ್ಸಿಕ್ಯಾಬ್ ಮುಂತಾದವುಗಳು ಗಳಿಸುತ್ತಿದ್ದ ಹಣಕ್ಕೂ ಕತ್ತರಿ ಬಿದ್ದಿದೆ. ನಿಷೇದಾಜ್ಞೆಯಿಂದ ಸಂತೆ ಸರಂಜಾಮುಗಳು, ತೆರೆಯದ ಕಾರಣ ಬೆಲೆ ಏರಿಕೆಯೂ ಸಾಮಾನ್ಯ ವಾಗಿರುತ್ತದೆ.ಇದರ ಬಿಸಿ ಮಧ್ಯಮ ಮತ್ತು ಬಡವರ್ಗದವರಿಗೆ ತಟ್ಟಿದೆ.ಕೋರೋನಾ ಕಾಯಿಲೆಯಿಂದ ಸತತ ಮೂರು ವರ್ಷಗಳಿಂದ ಹಬ್ಬದ ಆಚರಣೆಗೆ ಅಡ್ಡಿ ಉಂಟಾಗಿತ್ತು.ಈ ಬಾರಿ ವಿಜ್ರಂಭಣೆಯ ಹಬ್ಬ ಆಚರಿಸಲು ಕನಸು ಕಂಡಿದ್ದ ಜನಸಾಮಾನ್ಯರಿಗೆ ನಿರಾಸೆ ಉಂಟಾಗಿದೆ ಈ ಪರಿಸ್ಥಿತಿಗೆ ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯೇ ನೇರ ಹೊಣೆ.ಮಾನ್ಯ ಸಿದ್ದರಾಮಯ್ಯನವರು ನೆರೆಪೀಡಿತ ಪ್ರದೇಶಗಳ ಭೇಟಿಯ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೂಕ್ತ ಬಂದೋಬಸ್ತ್ ಒದಗಿಸಿದ್ದರೆ ಆ ದಿನ ಅಹಿತಕರ ಘಟನೆಗಳು ನಡೆಯುತ್ತಿರಲ್ಲ. ಮುಂಜಾಗ್ರತೆ ಕ್ರಮ ವಹಿಸಿದರೆ ಈ ದುಸ್ಥಿಸ್ತಿ ಉದ್ಭವಿಸುತ್ತಿರಲಿಲ್ಲ. ಜನಸಾಮಾನ್ಯರೂ ಸಂಕಷ್ಟಕ್ಕೆಈಡಾಗುತ್ತಿರಲಿಲ್ಲ.ಜನಸಾಮಾನ್ಯರ ಹಬ್ಬದ ಸಂಭ್ರಮಕ್ಕೆ ಕೊಳ್ಳಿಯಿಟ್ಟ ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಇನ್ನಾದರೂ ಇಂತಹ ಪರಿಸ್ಥಿತಿಗೆ ಎಡೆಮಾಡಿಕೊಡದೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ಒತ್ತಾಯಿಸಿದ್ದಾರೆ.