ಸಭೆ

ಕಣಿವೆಯಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮ: ಗ್ರಾಮಸ್ಥರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಪ್ರಕಾಶ್

ಕುಶಾಲನಗರ, ಆ 21: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಕುಶಾಲನಗರ ತಾಲ್ಲೂಕು ಮಟ್ಟದ ಕಾರ್ಯಕ್ರಮ ಕುಶಾಲನಗರ ತಹಶೀಲ್ದಾರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು.
ಕಣಿವೆ, ಹುಲುಸೆ ಹಕ್ಕೆ ಗ್ರಾಮಗಳಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿರುವ ನಿವೇಶನ ರಹಿತ ಕುಟುಂಬರಿಗೆ ನಿವೇಶನವನ್ನು ನೀಡುವಂತೆ ಮತ್ತು ಈಗಾಗಲೇ ಕಳೆದ 5 ವರ್ಷಗಳ ಹಿಂದೆ ದಿಡ್ಡಳ್ಳಿ ನಿರಾಶ್ರಿತರಿಗೆ ಕಣಿವೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಗುರುತಿಸಲಾದ ಜಾಗದಲ್ಲಿ ಮನೆಗಳ ನಿರ್ಮಾಣ ವ್ಯವಸ್ಥೆ ಮಾಡಬೇಕೆಂದು ಆಯಾ ಗ್ರಾಮಗಳ ನೂರಾರು ಗ್ರಾಮಸ್ಥರು ಒತ್ತಾಯಿಸಿದರು.
ಕಣಿವೆ ಗ್ರಾಮವು ಶೀತಪ್ರದೇಶವಾಗಿದ್ದು ಮೇಲ್ಭಾಗದಲ್ಲಿ ಎರಡೂ ಕಡೆ ಹಾರಂಗಿ ನಾಲೆಯ ನೀರು, ಮತ್ತೊಂದೆಡೆ ಕಾವೇರಿ ‌ನದಿಯ ನೀರು ಆವರಿಸಿದೆ. ಗ್ರಾಮದಲ್ಲಿ ಪೈಸಾರಿ ಜಾಗವಿದ್ದರೂ ಸ್ಮಶಾನ ಕ್ಕೆ ಜಾಗವಿಲ್ಲದೆ ಪರದಾಡುವಂತಹ ಪ್ರಸಂಗ ಎದುರಾಗುತ್ತಿದೆ. ಈಗಾಗಲೇ ಕಾಯ್ದಿರಿಸಿಕೊಂಡಿರುವ 1/1 ರಲ್ಲಿ ಹತ್ತು ಎಕರೆಗಳಷ್ಟು ಜಾಗದಲ್ಲಿ ನಿವೇಶನ ರಹಿತರಿಗೆ ಮನೆಗಳ ನಿರ್ಮಾಣದ ಹಕ್ಕುಗಳನ್ನು ಕಂದಾಯ ಇಲಾಖೆಯ ವತಿಯಿಂದ ನೀಡಬೇಕೆಂದು ಗ್ರಾಮಸ್ಥರಾದ ಭಾರಧ್ವಜ್, ವೆಂಕಟೇಶ್, ಪ್ರಕಾಶ್ ಮಂಜುನಾಥ್, ಕಿರಣ್, ಲೋಕೇಶ್ ಮಹದೇವ ಮನವಿ ಪತ್ರ ಸಲ್ಲಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ನಂತರ ತಾಲ್ಲೂಕು ತಹಶೀಲ್ದಾರ್ ಪ್ರಕಾಶ್ ಮಾತನಾಡಿ, ಈಗಾಗಲೇ ದಿಡ್ಡಳ್ಳಿ ನಿರಾಶ್ರಿತರಿಗೆ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಗವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಮತ್ತು ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪ್ರಸ್ತಾವನೆಯ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಕ್ಕುಪತ್ರ ವಿತರಣೆಗೆ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲ ಪ್ರದೇಶದಲ್ಲಿ 74/7 ರಲ್ಲಿ ಗೋಮಾಳ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಹಕ್ಕು ಪತ್ರವನ್ನು ನೀಡುವ ಭರವಸೆಯನ್ನು ನೀಡಿದರು. ಸ್ಮಶಾನ ಜಾಗಕ್ಕೆ ಪೈಸಾರಿ ಜಾಗವನ್ನು ಗುರುತಿಸಿ ನಂತರ ವ್ಯವಸ್ಥೆ ಮಾಡಲಾಗುವುದು ಎಂದರು.
ಕೂಡಿಗೆ ಕಾವೇರಿ ಹಾರಂಗಿ ನದಿಯ ಸಂಗಮದ ಪ್ರದೇಶದಿಂದ ಹೆಬ್ಬಾಲೆ ವರೆಗಿನ ಕಾವೇರಿ ನದಿಯಂಚಿನ ಪ್ರದೇಶದಲ್ಲಿ ಬೆಳೆಸಲಾದ ಬೆಳೆಗಳನ್ನು ಮಂಗಣ್ಣಗಳು ತಿಂದು ಹಾಳುಮಾಡುತ್ತಿವೆ. ಮಂಗಗಳನ್ನು ಬೇರೆಡೆ ಸಾಗಿಸುವ ಪ್ರಯತ್ನವನ್ನು ಅರಣ್ಯ ಇಲಾಖೆಯವರು ಮಾಡಬೇಕೆಂದು ಕಾವೇರಿ ನದಿಯಂಚಿನ ಪ್ರದೇಶದ ರೈತರು ಸಭೆಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರ್ವೆ ಇಲಾಖೆ, ಕೃಷಿ, ತೋಟಗಾರಿಕೆ, ಅಹಾರ ಇಲಾಖೆ, ಅರೋಗ್ಯ, ಅರಣ್ಯ ಇಲಾಖೆ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಗ್ರಾಮಸ್ಥರ ಅಹವಾಲು ಗಳನ್ನು ಸ್ವೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನದ ಪ್ರಮಾಣ ಪತ್ರ ವಿತರಿಸಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅರುಣಕುಮಾರಿ, ಉಪ ತಹಶೀಲ್ದಾರ್ ಮಧುಸೂದನ್, ತಾಲ್ಲೂಕು ಸಹಾಯಕ ನಿರ್ದೇಶಕ ರವೀಶ್, ಭೂಮಾಪನಾ ಇಲಾಖೆಯ ಮಹೇಶ್, ಅಭಿವೃದ್ಧಿ ಅಧಿಕಾರಿ ಅರುಣ್ ಬಾಸ್ಕರ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಪಂಚಾಯತಿ ಸರ್ವ ಸದಸ್ಯರು ಸೇರಿದಂತೆ ಮೂರು ಗ್ರಾಮಗಳ ನೂರಾರು ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!