ರಾಜಕೀಯ

ಲ್ಯಾಂಪ್ಸ್ ನಲ್ಲಿ ದುರುಪಯೋಗವಾದ 23 ಲಕ್ಷ ಮರುಪಾವತಿ: ಶಾಸಕ ಅಪ್ಪಚ್ಚುರಂಜನ್ ಮಾಹಿತಿ

ಎಸ್.ಎನ್.ರಾಜಾರಾವ್ ವಿರುದ್ದ ವ್ಯಂಗ್ಯವಾಡಿದ ಶಾಸಕ ಅಪ್ಪಚ್ಚುರಂಜನ್

ಕುಶಾಲನಗರ, ಜು 20: ಬಸವನಹಳ್ಳಿಯಲ್ಲಿ ಲ್ಯಾಂಪ್ಸ್ ಸೊಸೈಟಿಯಲ್ಲಿ ಹಿಂದಿನ ಅವಧಿಯ ಅಧ್ಯಕ್ಷರ ಅವಧಿಯಲ್ಲಿ ನಡೆದಿದ್ದ 23 ಲಕ್ಷ ಹಣದ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಅವರು ಸಂಘಕ್ಕೆ‌ ಹಣ ಮರುಪಾವತಿ ಮಾಡಿದ್ದಾರೆ ಎಂದು ಮಡಿಕೇರಿ‌ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಪಂ ಮಾಜಿ ಅಧ್ಯಕ್ಷರೂ ಆದ ಎಸ್.ಎನ್.ರಾಜಾರಾವ್ ಅವರು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 23 ಲಕ್ಷ ಹಣ ದುರುಪಯೋಗವಾದ ವಿಚಾರ ಹಾಲಿ ಆಡಳಿತ ಮಂಡಳಿ ಅಧ್ಯಕ್ಷರು ಬಹಿರಂಗಪಡಿಸಿದ್ದರು. ಸರಕಾರ ಈ ಅಕ್ರಮದ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ವಿಚಾರದ ಹಿನ್ನಲೆಯಲ್ಲಿ ಈ ದುರುಪಯೋಗದ ಬಗ್ಗೆ ತಾನು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದೆ. ಆದರೆ ಎಸ್.ಎನ್.ರಾಜಾರಾವ್ ಅವರು ಸುದ್ದಿಗೋಷ್ಠಿ ಕರೆದು, ತನ್ನಿಂದ ಯಾವುದೇ ದುರುಪಯೋಗ ಆಗಿಲ್ಲ. ಶಾಸಕರು ಇಲ್ಲಸಲ್ಲದ ರಾಜಕೀಯ ಮಾಡುತ್ತಿದ್ದು ವಿಧಾನಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ಅವರು ದುರುಪಯೋಗವಾದ ಸಂಪೂರ್ಣ 23 ಲಕ್ಷವನ್ನು ಸಂಘಕ್ಕೆ‌ ಮರುಪಾವತಿ ಮಾಡಿದ್ದಾರೆ. ದುರುಪಯೋಗ ನಡೆಯದೆ ಇದ್ದರೆ ಹಣವನ್ನು ಯಾವ‌ ಕಾರಣಕ್ಕೆ ಮರುಪಾವತಿ ಮಾಡಿದರು ಎಂದು ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಯಾರೂ ಕೂಡ ತಪ್ಪು ಮಾಹಿತಿ ಪ್ರಸ್ತಾಪಿಸಲು ಅವಕಾಶವಿಲ್ಲ. ತಪ್ಪು ಮಾಹಿತಿ ನೀಡಿದ ಶಾಸಕರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂಬ ಕನಿಷ್ಠ ಅರಿವು ಕೂಡ ರಾಜಾರಾವ್ ಅವರಿಗಿಲ್ಲ ಎಂದರು.
ತಾನು ಯಾವುದೇ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡುವುದಿಲ್ಲ. ಎಲ್ಲಿ ತಪ್ಪು ನಡೆದಿದೆಯೋ ಅಂತಹ ವಿಚಾರಗಳ ಬಗ್ಗೆ ದನಿ ಎತ್ತುತ್ತೇನೆ. ಯಾವುದೇ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಅಕ್ರಮಗಳು ಇಲ್ಲದಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರ, ನಗರ‌ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!