ಕುಶಾಲನಗರ, ಆ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೊಡಗು-ಹಾಸನ ಗಡಿ ಶಿರಂಗಾಲದಿಂದ ಕುಶಾಲನಗರದ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ಶಿರಂಗಾಲ, ತೊರೆನೂರು, ಹೆಬ್ಬಾಲೆ, ವ್ಯಾಪ್ತಿಯ ರೈತರು, ಬಿಜೆಪಿ ಕಾರ್ಯಕರ್ತರು 75 ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳೊಂದಿಗೆ ಜಾಥಾ ನಡೆಸಿದರು.
ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಜಾಥಾಗೆ ಚಾಲನೆ ನೀಡಿದರು.
75 ಟ್ರಾಕ್ಟರ್, 100 ಮೋಟಾರ್ ಬೈಕ್, 70 ಕಾರು ಮತ್ತು ಜೀಪುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಭಾರತಾಂಬೆಯ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕುಶಾಲನಗರದ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾಥಾ ಸಮಾಪ್ತಿಗೊಂಡಿತು.
ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ರಾಷ್ಟ್ರಾಭಿಮಾನ, ರಾಷ್ಟ್ರಪ್ರೇಮ ಮೂಡಿಸುವ ನಿಟ್ಟಿನಲ್ಲಿ ಅಮೃತ ನಡಿಗೆ ದೇಶದ ಕಡೆಗೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಬ್ವರೂ ಕೂಡ ಸ್ವಾತಂತ್ರ್ಯ ಕ್ಕಾಗಿ ತ್ಯಾಗ ಬಲಿದಾನಗೈದವರ ಸ್ಮರಿಸಬೇಕಿದೆ. ಒಗ್ಗೂಡಿ ಮನೆಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯದ ಸಂಭ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭ ಕುಶಾಲನಗರ ಪಪಂ ಅಧ್ಯಕ್ಷ ಜೈವರ್ಧನ್,
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಭಾರತೀಶ್, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಮುಳ್ಳುಸೋಗೆ, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷರಾದ ಚೆಲುವರಾಜು, ಇಂದಿರಾ ರಮೇಶ್, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಮಂಜುಳಾ, ವೇದಾವತಿ, ವರದ ಸೇರಿದಂತೆ ವಿವಿಧ ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು, ರೈತರು ಇದ್ದರು.