ಒಬಿಸಿ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿ ಆ.1 ರಂದು ಡಿಸಿಗೆ ಮನವಿ ಸಲ್ಲಿಕೆ
ಕುಶಾಲನಗರ, ಜು 31: ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ)ಪಟ್ಟಿಗೆ ವೀರಶೈವ -ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಆ.1 ರಂದು ಸೋಮವಾರ ಕೊಡಗು ಜಿಲ್ಲೆಯ ಸ್ವಾಮೀಜಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ-ಲಿಂಗಾಯತ ಸಮುದಾಯವು ರಾಜ್ಯದ ಇತರೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದರೂ ಈ ವರ್ಗವನ್ನು ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದ್ದು,ಈ ಹಿನ್ನೆಲೆಯಲ್ಲಿ ಆ.1ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಐದು ತಾಲ್ಲೂಕಿನಿಂದ ಸುಮಾರು 200 ಮಂದಿ ಸಮುದಾಯ ಬಾಂಧವರು ಮಹಾಸಭಾದ ಗೌರವಾಧ್ಯಕ್ಷರಾದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮತ್ತು ಕಲ್ಲುಮಠದ ಮಹಾಂತ ಸ್ವಾಮೀಜಿ, ವಿರಾಜಪೇಟೆ ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಮಹಸಾಭಾದ ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜು ನೇತೃತ್ವದಲ್ಲಿ ಶಾಂತಿಯುತವಾಗಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ಸತೀಶ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಲಾಗುವುದು ಎಂದರು. ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿರುವ ತಿಗಳ,ಈಡಿಗ,ಒಕ್ಕಲಿಗ,ದೇವಾಂಗ ಮತ್ತು ಬಲಿಜ ಸಮುದಾಯಗಳಿಗಿಂತ ವೀರಶೈವ-ಲಿಂಗಾಯತ ಸಮುದಾಯವು ಹಿಂದೂಳಿದ್ದರೂ ಕೇಂದ್ರದ ಒಬಿಸಿ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ.ಸಮುದಾಯ ಪ್ರತಿಭಾವಂತರು ಅನೇಕ ದಶಕಗಳಿಂದ ಹತ್ತಾರು ಅವಕಾಶಗಳಿಂದ ವಂಚಿತರಾಗಿರುತ್ತಾರೆ.ಜೊತೆಗೆ ಕೇಂದ್ರದ ಅಖಿಲ ಭಾರತ ಆಡಳಿತ ಸೇವೆಗಳಲ್ಲಿ,ಸಾರ್ವಜನಿಕ ಉದ್ಯಮಗಳಲ್ಲಿ,ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮತ್ತು ಯುಪಿಎಸ್ಸಿ,ಎಸ್ಎಸ್ಸಿ ಮತ್ತು ಆರ್ಆರ್ಬಿ ಮುಖಾಂತರ ನಡೆಸುವ ಉದ್ಯೋಗವಕಾಶಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯದವರು ಬೆರಳೆಣಿಕೆಯಷ್ಟು ಮಾತ್ರ ಇರುತ್ತಾರೆ.ಅದೇ ರೀತಿ ಕೇಂದ್ರ ಸ್ವಾಮ್ಯದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ, ಐಐಎಂ,ಎನ್ಐಟಿ,ಎನ್ಇಇಟಿ,ಎಐಐಎಂಎಸ್ ,ಕೇಂದ್ರೀಯ ವಿಶ್ವ ವಿದ್ಯಾನಿಲಯಗಳು ,ಕೇಂದ್ರೀಯ ವಿದ್ಯಾಲಯ,ನವೋದಯ ಶಾಲೆಗಳು ಹೀಗೆ ಹತ್ತು ಹಲವಾರು ಸಂಸ್ಥೆ ಗಳಿಗೆ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿಲ್ಲ.ಆದ್ದರಿಂದ ಈ ಸವಲತ್ತುಗಳನ್ನು ಪಡೆಯುವ ಸಲುವಾಗಿ ವೀರಶೈವ – ಲಿಂಗಾಯತ ಸಮುದಾಯ ಎಲ್ಲ ಪಂಗಡಗಳನ್ನು ಒಳಗೊಂಡಂತೆ ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ)ಪಟ್ಟಿಯಲ್ಲಿ ಸೇರಿಸುವಂತೆ ರಾಜ್ಯಾದ್ಯಂತ ಹಕ್ಕೊತ್ತಾಯ ಮಾಡಲಾಗುತ್ತದೆ ಎಂದರು.
ಸೋಮವಾರ ಈ ಕಾರ್ಯಕ್ರಮಕ್ಕೆ ಸಮಾಜದ ಎಲ್ಲ ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅವರು ಮನವಿ ಮಾಡಿದರು.
ಗೋಷ್ಠಿಯಲ್ಲಿ ವೀರಶೈವ ಮಹಾಸಭಾದ ಕೊಡಗು ಘಟಕದ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ,ಖಜಾಂಚಿ ಉದಯಕುಮಾರ್ ಇದ್ದರು.
Back to top button
error: Content is protected !!