ಸೋಮವಾರಪೇಟೆ : ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪೋಷಕರ ಸಭೆ
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವದಾಗಿದೆ : ಪಾಂಡುರಂಗ
ಸೋಮವಾರಪೇಟೆ : ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಾಲೆ ಮತ್ತು ಶಿಕ್ಷಕರಷ್ಟೇ ಪಾತ್ರ ಕುಟುಂಬ ಹಾಗೂ ಪಾಲಕರದ್ದು ಎಂಬುದನ್ನು ಮರೆಯಬಾರದು ಎಂದು ಮೈಸೂರು ದೀಕ್ಷಾ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಎಚ್.ಆರ್.ಪಾಂಡುರಂಗ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ,ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತೋಳೂರು ಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ
ಪೋಷಕರ ಹಾಗೂ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಾಲ್ಯದಿಂದಲೇ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ಸಂಸ್ಕಾರವನ್ನು ಕಲಿಸುವ ಮೂಲಕ ಅವರನ್ನು ಸಮಾಜದಲ್ಲಿ ಉತ್ತಮ ಸತ್ಪ್ರಜೆಗಳಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು. ಬಡತನಕ್ಕೆ ಅಂತ್ಯ ಹಾಡುವುದೇ ಶಿಕ್ಷಣ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಮಕ್ಕಳಿಗಾಗಿ ಕಷ್ಟಪಟ್ಟು ಆಸ್ತಿ ಅಂತಸ್ತು ಮಾಡಬೇಡಿ,ಇದರ ಬದಲಿಗೆ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವ ಮೂಲಕ ಸಮಾಜಕ್ಕೆ ಅವರನ್ನು ಆಸ್ತಿವಂತರನ್ನಾಗಿ ಮಾಡಿ ಎಂದು ಪಾಂಡುರಂಗ ಸಲಹೆ ನೀಡಿದರು.
ಶಿಕ್ಷಕರು ನಿಮ್ಮ ಮಗುವಿನ ಯಾವುದೇ ಸಮಸ್ಯೆಯನ್ನು ಮುಂದಿಟ್ಟಾಗ ಅದನ್ನು ಅವಮಾನವೆಂದು ಭಾವಿಸಿ ನಕರಾತ್ಮಕ ದೃಷ್ಟಿಯಿಂದ ನೋಡಬೇಡಿ. ನಿಮ್ಮ ಮಗುವಿನ ಒಳಿತಿಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪೋಷಕರು ಮಕ್ಕಳಿಗೆ ಆತ್ಮಸ್ಥೆರ್ಯ,ಛಲ ಹಾಗೂ ಧೈರ್ಯವನ್ನು ಬೆಳೆಸಬೇಕು.ಯಾವುದೇ ಕಾರಣಕ್ಕೂ ಅವರನ್ನು ಬೇರೆ ಮಕ್ಕಳಿಗೆ ಹೊಲಿಕೆ ಮಾಡಿ ಟೀಕಿಸಬಾರದು.ಅವರ ಆತ್ಮ ಸ್ಥೈರ್ಯ ವನ್ನು ಕುಗ್ಗಿಸುವ ಕೆಲಸವನ್ನು ಮಾಡಬಾರದು ಎಂದರು.
ಮಕ್ಕಳಿಗೆ ತಂದೆತಾಯಿಗಳೇ ಆದರ್ಶಪ್ರಾಯರಾಗಬೇಕು ಎಂದರು. ಯಾವುದೇ ಮಕ್ಕಳು ದಡ್ಡರಲ್ಲ ಅವರಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತದೆ. ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲವನ್ನು ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಯಾವುದೇ ವ್ಯಕ್ತಿ ಅಥವಾ ನಾಯಕರನ್ನು ಅನುಕರಣೆ ಮಾಡುವುದನ್ನು ಹೇಳಿಕೊಡುವ ಬದಲು ಹೊಸತನ, ಹೊಸ ಆವಿಷ್ಕಾರಗಳಿಗೆ ಒತ್ತು ನೀಡುವ ಮೂಲಕ ಅವರನ್ನು ಕ್ರಿಯಾಶೀಲ ವಿದ್ಯಾರ್ಥಿಯಾಗಿ ರೂಪಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ,ಶಿಕ್ಷಣವೇ ಸರ್ವತೋಮುಖ ಬೆಳವಣಿಗೆಗೆ ಕಾರಣ.ಮಕ್ಕಳು ನಿರಂತರವಾಗಿ ಅಧ್ಯಯನ ಮಾಡುವ ಜೊತೆಗೆ ಗುಣಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು.
ಅಂಬೇಡ್ಕರ್, ಬಸವಣ್ಣ, ವಿವೇಕಾನಂದ, ಬುದ್ಧ ಅವರ ಆದರ್ಶ ಜೀವನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಗು ಅತಿಹೆಚ್ಚಿನ ಸಮಯವನ್ನು ಪಾಲಕರೊಂದಿಗೆ ಕಳೆಯುವುದರಿಂದ ಮಗುವಿನ ಬಗ್ಗೆ ಹೆಚ್ಚಿನ ವಿಷಯಗಳನ್ನು ಪೋಷಕರಿಂದ ಶಿಕ್ಷಕರು ತಿಳಿಯಲು ಅಂತೆಯೇ, ಶೈಕ್ಷಣಿಕ ವಿಷಯಗಳು ಮತ್ತು ತಮ್ಮ ಮಗುವಿನ ತರಗತಿಯಲ್ಲಿನ ವರ್ತನೆಯನ್ನು ತಿಳಿಯಲು ಪೋಷಕರಿಗೆ ಇದೊಂದು ಸದಾವಕಾಶ. ಇದು ಶಿಕ್ಷಿಸಲು ವಿಷಯ ತಿಳಿದುಕೊಳ್ಳುವ ಸಂದರ್ಭವಲ್ಲ ಎಂಬುದನ್ನು ಶಿಕ್ಷಕರು ಹಾಗೂ ಪೋಷಕರು ಮನಗಾಣಬೇಕು ಎಂದು ಹೇಳಿದರು.
ಜಿಲ್ಲಾ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿ ಲೋಕೇಶ್ ಮಾತನಾಡಿ, ತೋಳಿರು ಶೆಟ್ಟಳ್ಳಿಯಲ್ಲಿ ರೂ.28 ಕೋಟಿ ವೆಚ್ಚದಲ್ಲಿ ವಸತಿ ಶಾಲೆಯ ಕಟ್ಟಡ ನಿರ್ಮಾಣವಾಗುತ್ತಿದೆ.ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು,ಸಧ್ಯದಲ್ಲಿಯೇ ಉದ್ಘಾಟನೆಯಾಗಿ ಸೋಮವಾರಪೇಟೆಯಿಂದ ಅಂಬೇಡ್ಕರ್ ವಸತಿ ಶಾಲೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುವುದು ಎಂದರು.
ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತಾಸೆಯಾಗಿ ಸರ್ಕಾರ ವಸತಿ ಶಾಲೆಗಳನ್ನು ಸ್ಥಾಪನೆ ಮಾಡಿದೆ. ಎಲ್ಲ
ವಸತಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು,ಈ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ.ಆದ್ದರಿಂದ ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ವಹಿಸಿದ್ದರು.ಶಿಕ್ಷಕರಾದ ಭವ್ಯಾ,ಗೌತಮಿ,ಶಬನಾ,ಪುಷ್ಪಲತಾ,ಮೇಘಾ,ಆಶಾ,ಶಬರಿಗಿರೀಶ್, ನರ್ಸ್ ಶೈಲಾ, ಗುಮಾಸ್ತ ಅಭಿಷೇಕ್ ಉಪಸ್ಥಿತರಿದ್ದರು. ಇದೇ ಸಂದರ್ಭ ವಸತಿ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಲೋಕೇಶ್ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಅದೇ ರೀತಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಶಾಲೆ ವಿದ್ಯಾರ್ಥಿಗಳಾದ ನೀತಾ,ಮಾನಸ,ವೈಷ್ಣವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Back to top button
error: Content is protected !!