ಕುಶಾಲನಗರ, ಮಾ 02: ಹಾರಂಗಿ ಅಣೆಕಟ್ಟೆ ಮುಂಭಾಗ
ಹಾರಂಗಿ-ಕುಶಾಲನಗರ ಮಾರ್ಗದಲ್ಲಿ ಅಪೂರ್ಣಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ
ಮಂತರ್ ಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಸಂದರ್ಭ ಹೊರ ಹರಿವು ಹೆಚ್ಚಳವಾದಾಗ ಈ ಭಾಗದಲ್ಲಿ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೊಡಕುಂಟಾಗುತ್ತಿತ್ತು. ಈ ನಿಟ್ಟಿನಲ್ಲಿ
ಕಾವೇರಿ ನೀರಾವರಿ ನಿಗಮದ ಮೂಲಕ ರೂ 1 ಕೋಟಿ ವೆಚ್ಚದಲ್ಲಿ ಕೊಲ್ಲಿ ಮೇಲ್ಭಾಗದಲ್ಲಿ ಸೇತುವೆ ನಿರ್ಮಿಸಿ 6 ಅಡಿ ಎತ್ತರಕ್ಕೆ ರಸ್ತೆ ಎತ್ತರಿಸಿ ಅಗಲೀಕರಣಗೊಳಿಸಿ ಅಭಿವೃದ್ದಿಗೊಳಿಸಲಾಗುವುದು ಎಂದು ತಿಳಿಸಿದರು.
ಕೊಡಗು ವಿವಿಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
ಕೊಡಗು ವಿವಿ ಉಳಿಸಲು ನಾವು ಶತಾಯಗತಾಯ ಪ್ರಯತ್ನ ನಡೆಸುತ್ತೇವೆ. ಸಿಎಂ ಹಾಗೂ ಡಿಸಿಎಂ ಬಳಿ ಶೀಘ್ರದಲ್ಲಿಯೇ ನಿಯೋಗ ಕೊಂಡೊಯ್ಯಲಾಗುವುದು.
ವಿವಿ ಉಳಿಸಲು ಎಬಿವಿಪಿ ಹಾಗೂ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ಅಮಾಯಕ ಕಾಲೇಜು ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಪಕ್ಷಾತೀತ ಹೋರಾಟಕ್ಕೆ ಮಾತ್ರ ಬಳಕೆಯಾಗಬೇಕು. ಅವರನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳಬಾರದು. ಕೊಡಗು ವಿವಿ ಸ್ಥಾಪನೆ ಆರಂಭದಲ್ಲೇ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ವಿವಿ ಆರಂಭವಾದ ನಂತರ ಅದರ ಸ್ಥಿತಿಗತಿ ಬಗ್ಗೆಯೂ ತಲೆಕೆಡಿಸಿಕೊಳ್ಳದ ಕಾರಣ ಈ ಪರಿಸ್ಥಿತಿ ತಲೆದೋರಿದೆ.
ವಿವಿ ಹೋರಾಟ ಪಕ್ಷಾತೀತವಾಗಿರಬೇಕು.
ನಾನು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದೇನೆ. ನಿಯೋಗ ಹೋಗಿ ಸಾಮೂಹಿಕವಾಗಿ ಎಲ್ಲರೂ ಬೇಡಿಕೆ ಇಡುತ್ತೇವೆ ಎಂದರು.
ಈ ಸಂದರ್ಭ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಕುಶಾಲನಗರ ಪುರಸಭೆ ಸದಸ್ಯ ವಿ.ಜೆ.ನವೀನ್, ಕುಡಾ ಸದಸ್ಯ ಶಾಜಿ, ಮುಖಂಡ ರಂಜನ್ ಹೆಬ್ಬಾಲೆ, ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟ ಸ್ವಾಮಿ, ಸೇರಿದಂತೆ ಗ್ರಾಮಸ್ಥರು, ಪಕ್ಷದ ಪ್ರಮುಖರು ಇದ್ದರು.
Back to top button
error: Content is protected !!