ಸಾಹಿತ್ಯ

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ” ವಚನ ಗಾಯನ ಸ್ಪರ್ಧಾ ಕಾರ್ಯಕ್ರಮ

ಕುಶಾಲನಗರ, ಜ 12:
ವಚನಕಾರರ ಪರಂಪರೆಯ ಮರೆತು ಹೋದ ಮೌಲ್ಯಗಳನ್ನು ಪುನಃ ಸ್ಮರಣೆ ಮಾಡುವ ಕೆಲಸ ವಚನಗಳ ಪಠನ ಹಾಗೂ ಮನನದಿಂದ ಆಗಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ” ವಚನ ಗಾಯನ ಸ್ಪರ್ಧಾ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ.

ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಕಂದಾಚಾರ ಹಾಗೂ ಮೂಢನಂಬಿಕೆಗಳ ವಿರುದ್ದ ಸಮರವನ್ನು ಸಾರಿ ಕ್ರಾಂತಿ ಉಂಟು ಮಾಡಿದ ಶರಣರ ವಚನಗಳು ಆಧ್ಯಾತ್ಮದ ನೆಲೆಯೊಳಗೆ ಬದುಕಿನ ಸಾರ ತತ್ಬವನ್ನು ಸಾರಿ ಜಟಿಲವಾಗಿದ್ದ ಮನುಷ್ಯನ ಬದುಕನ್ನು ಸರಳಗೊಳಿಸಿದ ದೀವಿಗೆಗಳು ಎಂದು ಕುಲಪತಿಗಳು ಆಶಿಸಿದರು.

ಹನ್ನೆರಡನೇ ಶತಮಾನದ ಆಯ್ದಕ್ಕಿ ಲಕ್ಕಮ್ಮ ಹಾಗೂ ಆಯ್ದಕ್ಕಿ ಮಾರಯ್ಯನ ಆದರ್ಶಗಳು ಇಂದಿನ ಲಂಚಕೋರರು ಹಾಗೂ ಭ್ರಷ್ಟರಿಗೆ ಜೀವನದ ಪಾಠಗಳಾಗಬೇಕಿದೆ ಎಂದು ಕರೆಕೊಟ್ಟ ಕುಲಪತಿಗಳು, ವಿದ್ಯಾರ್ಥಿಗಳಿಗೆ ಶಿಕ್ಷಣ ಕೇವಲ ಪದವಿಗಳಿಗೆ ಸೀಮಿತವಾಗದೇ ಜೀವನದ ಪಾರಮಾರ್ಥಿಕ ಹಾಗು ಲೌಕಿಕ ಜ್ಞಾನವನ್ನು ನೀಡಬೇಕಿದೆ ಎಂದು ಕುಲಪತಿಗಳು ಹೇಳಿದರು.

ಜಿಪಂ ಮಾಜಿ ಸದಸ್ಯ, ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿದ್ದ ಜಡತೆ ಮತ್ತು ಜಾತಿಯ ಕತ್ತಲು, ಜಾತಿ ಬೇಧ, ಮೇಲು – ಕೀಳೆಂಬ ಅಜ್ಞಾನದ ಕತ್ತಲನ್ನು ಕಳೆದು ವಚನಗಳ ಮೂಲಕ ಜ್ಞಾನದ ಬೆಳಕು ಸಾರಿದ ವಚನಕಾರರ ಸಂದೇಶಗಳು ಇಂದಿನ ಜನಮಾನಸಕ್ಕೆ ಅತಿ ಉಪಯುಕ್ತ ಎಂದರಲ್ಲದೇ ಮನುಷ್ಯನ ಉತ್ತಮ ಜೀವನಕ್ಕೆ ಕಲಬೇಡ – ಕೊಲಬೇಡ – ಹುಸಿಯ ನುಡಿಯ ಬೇಡ ಎಂಬ ವಚನವೊಂದರ ಸಾರ ಸಾಕು ಎಂದು ಶಶಿಧರ್ ವಿಶ್ಲೇಷಿಸಿದರು.

ಬಸವನಹಳ್ಳಿ ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಪ್ರಕಾಶ್, ಮಡಿಕೇರಿ ಲಯನ್ಸ್ ಅಧ್ಯಕ್ಷ ಮೋಹನಕುಮಾರ್, ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಕೋಶಾಧಿಕಾರಿ ಸಿ.ಎ.ರಾಜು, ಉಪನ್ಯಾಸಕರಾದ ಕೆ.ಆರ್.ರಮೇಶ್, ವರ್ಷಾ, ಶಿವಕುಮಾರ್, ಸಂಗೀತಾ ಶಿಕ್ಷಕ ಪುಟ್ಟರಾಜು ಇದ್ದರು.

ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು. ಉಪನ್ಯಾಸಕಿ ವರ್ಷಾ ಸ್ವಾಗತಿಸಿದರು. ರಮೇಶ್ ನಿರೂಪಿಸಿ, ಜಗದೀಶ್ ವಂದಿಸಿದರು..

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us