ಕುಶಾಲನಗರ,ಫೆ 25: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು 100 ಬೆಡ್ ಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸೂಕ್ತ ಕ್ರಮವಹಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭರವಸೆ ನೀಡಿದರು.
ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ 50ನೇ ಕಾರ್ಯಕ್ರಮವಾಗಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ
ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ನುಡಿನಮನ ಹಾಗೂ ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲರ ಜನ್ಮ ಶತಮಾನೋತ್ಸವದ ಕುಶಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಶಾಲನಗರ ತಾಲೂಕಾಗಿ ಘೋಷಣೆಯಾದ ನಂತರ ತಾಲೂಕು ಅಸ್ಪತ್ರೆ ಸ್ಥಾಪನೆಗೆ ಹೆಚ್ಚಿನ ಬೇಡಿಕೆ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಈ ಸಾಲಿನ ಬಜೆಟ್ ನಲ್ಲಿ ಇದನ್ನು ಸೇರಿಸಲು ತಾನು ಅಗತ್ಯ ಕ್ರಮವಹಿಸಲಿದ್ದೇನೆ. ಅಲ್ಲದೆ ನೂತನ ತಾಲೂಕು ಪೊನ್ನಂಪೇಟೆಗೆ ಕೂಡ ಸಮುದಾಯ ಆರೋಗ್ಯ ಕೇಂದ್ರ ಒದಗಿಸಿ ನಂತರದ ದಿನಗಳಲ್ಲಿ ತಾಲೂಕು ಆಸ್ಪತ್ರೆಯಾಗಿಸಲು ಕ್ರಮವಹಿಸುವುದಾಗಿ ಅವರು ತಿಳಿಸಿದರು.
ರಾಜ್ಯ ಸರಕಾರ ಉಚಿತ ಗ್ಯಾರೆಂಟಿ ಯೋಜನೆಗಳ ನಡುವೆಯೂ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ. ಈ ಬಗ್ಗೆ ಅಪ್ರಪ್ರಚಾರ ಸಲ್ಲದು ಎಂದು ತಿಳಿಸಿದ ಅವರು, ತಮ್ಮ ತಂದೆ ದಿ.ಗುಂಡುರಾವ್ ಅವರಂತೆ ತಾನು ಕೂಡ ಕುಶಾಲನಗರದ ಅಭಿವೃದ್ಧಿಗೆ ಅಗತ್ಯ ಕೊಡುಗೆ ನೀಡುವುದಾಗಿ ಘೋಷಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಷ್ಪ ಶಿವರಾಂ ರೈ ಅವರ ತಂಬೆಲರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಊರಿನ ಬೆಳವಣಿಗೆಗೆ ಕೊಡುಗೆ ನೀಡಿದ ಹಿರಿಯರನ್ನು ಸ್ಮರಿಸಿಕೊಳ್ಳುವಂತಹ ಇಂತಹ ಕಾರ್ಯಕ್ರಮಗಳು ಅಭಿನಂದನಾರ್ಹ ಎಂದು ಶ್ಲಾಘಿಸಿದರು. ಹಾರಂಗಿ ಜಲಾಶಯ ನಿರ್ಮಾಣದಿಂದ ಮೈಸೂರು, ಕೊಡಗು ಭಾಗದ ರೈತರಿಗೆ ತುಂಬ ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದಿ.ಆರ್.ಗುಂಡೂರಾವ್ ಅವರ ಹಾಗೂ ದಿ.ವೀರೇಂದ್ರ ಪಾಟೀಲರನ್ನು ಸ್ಮರಣೆ ಮಾಡಬೇಕು ಎಂದರು.
ಕೇಂದ್ರ ಸರ್ಕಾರ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಅನುದಾನ ಕಲ್ಪಿಸಿದೆ.ಕೊಡಗಿನ 50 ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಪ್ರವಾಸಿಗರಿಗೆ ಎಲ್ಲಾ ರೀತಿ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು. ಮಾಜಿ ಶಾಸಕರ ಶ್ರಮದಿಂದ ಕೊಡಗು ವಿವಿ ಸ್ಥಾಪನೆಯಾಯಿತು. ಕೊಡಗು ವಿವಿಯನ್ನು ಸರ್ಕಾರ ಉಳಿಸುವ ಕೆಲಸ ಮಾಡಬೇಕಾಗಿದೆ. ಕೊಡಗು ವಿವಿ ಉಳಿಸಿ ಬೆಳೆಸಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ,
ಕೊಡಗು, ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿಗಳಾದ ದಿ.ಆರ್.ಗುಂಡೂರಾವ್ ಅವರ ಹಾಗೂ ದಿ.ವೀರೇಂದ್ರ ಪಾಟೀಲ ನೀಡಿದ ಕೊಡುಗೆ ಅಪಾರವಾಗಿದೆ.ಈ ಇಬ್ಬರು ಮಹಾನ್ ವ್ಯಕ್ತಿಗಳ ಸ್ಮರಣೆ ಅರ್ಥಪೂರ್ಣವಾಗಿದೆ.
ಹಾರಂಗಿ ಜಲಾಶಯ ನಿರ್ಮಾಣ, ಕೈಗಾರಿಕಾ ಬಡಾವಣೆ ನಿರ್ಮಿಸಿ ಕೊಡಗಿನ ಅಭಿವೃದ್ಧಿ ಶ್ರಮಿಸಿದ್ದಾರೆ. ಜೊತೆಗೆ ಗುಂಡೂರಾವ್ ಅವರು ಯುವ ಸಬಲೀಕರಣ ಸಚಿವರಾಗಿದ್ದ ವೇಳೆ ರಾಜ್ಯದಲ್ಲಿ ಪ್ರಥಮವಾಗಿ ಕೂಡಿಗೆಯಲ್ಲಿ ಕ್ರೀಡಾ ವಸತಿ ಶಾಲೆ ಸ್ಥಾಪಿಸಿದರು.ಈ ಕ್ರೀಡಾ ಶಾಲೆಗೆ ದಿ.ಗುಂಡೂರಾವ್ ಹೆಸರನ್ನು ನಾಮಕರಣ ಮಾಡಲು ಸಚಿವ ದಿನೇಶ್ ಗುಂಡೂರಾವ್ ವಿಶೇಷ ಗಮನಹರಿಸಬೇಕು ಎಂದು ಮನವಿ ಮಾಡಿದರು.ಜೊತೆಗೆ ಸಚಿವರು ತಮ್ಮ ಪ್ರಭಾವ ಬಳಸಿ ಕೊಡಗು ವಿವಿ ಉಳಿಸುವ ಕೆಲಸ ಮಾಡಬೇಕು ಎಂದು ದಿನೇಶ್ ಅವರಲ್ಲಿ ವಿನಂತಿಸಿಕೊಂಡರು.
ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ,
ಮಾಜಿ ಮುಖ್ಯಮಂತ್ರಿಗಳಾದ ದಿ.ಆರ್.ಗುಂಡೂರಾವ್ ಹಾಗೂ ದಿ.ವೀರೇಂದ್ರ ಪಾಟೀಲರ ಕೊಡುಗೆ ಅಪಾರವಾಗಿದೆ.ಹಾರಂಗಿ ಜಲಾಶಯ ನಿರ್ಮಾಣದಿಂದ ಕೊಡಗು, ಹಾಸನ ಹಾಗೂ ಮೈಸೂರು ಭಾಗದ ರೈತರ ಬದುಕು ಹಸನಾಗಿದೆ. ಅದೇ ರೀತಿ ಕೂಡ್ಲೂರು ಕೈಗಾರಿಕಾ ಬಡಾವಣೆ ನಿರ್ಮಾಣದಿಂದ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಜೀವನ ಕಂಡುಕೊಂಡಿದ್ದಾರೆ ಎಂದರು.ಹಾರಂಗಿ ಜಲಾಶಯ ವ್ಯಾಪ್ತಿಯ ನಾಲೆಗಳ ಆಧುನೀಕರಣ ಜೊತೆಗೆ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತುತ ಸಾಲಿನ ಬಜೆಟ್ ನಲ್ಲಿ ರಾಜ್ಯ ಸರಕಾರ ರೂ.150 ಕೋಟಿ ಅನುದಾನ ಒದಗಿಸಿಕೊಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು. ಕುಡಿಯುವ ನೀರಿನ ವ್ಯವಸ್ಥೆಗೆ ರೂ.50ಕೋಟಿ ,ಒಳಚರಂಡಿ, ಪುರಸಭೆ ಕಟ್ಟಡ ಪೂರ್ಣಗೊಳಿಸಲು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.ಜಿಲ್ಲೆಯಲ್ಲಿನ ವೈದ್ಯರು, ಸಿಬ್ಬಂದಿಗಳ ಕೊರತೆ ತುಂಬಬೇಕು.ತಾಲ್ಲೂಕು ಆಸ್ಪತ್ರೆಗೆ ಈ ಬಜೆಟ್ ಅನುದಾನ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ವ್ಯಾಪ್ತಿಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ಪುತ್ಥಳಿ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು, ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಚೌಡೇಗೌಡ, ಸಹಕಾರಿ ಧುರೀಣ ಟಿ.ಆರ್.ಶರವಣಕುಮಾರ್, ಕುಶಾಲನಗರ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ಇದ್ದರು.
ಇದೇ ವೇಳೆ ಮಾಜಿ ಶಾಸಕ ಕೈಲಾಶ್ ನಾಥ ವೀರೇಂದ್ರ ಪಾಟೀಲ್,ಮುಖಂಡರಾದ ವಿ.ಎನ್.ವಸಂತಕುಮಾರ್, ವಿ.ಪಿ.ಶಶಿಧರ್, ಆರ್.ಕೆ.ನಾಗೇಂದ್ರಬಾಬು,ಕೆ.ಪಿ.ಚಂದ್ರಕಲಾ, ಶರವಣಕುಮಾರ್, ಎಂ.ಕೆ.ದಿನೇಶ್ ಸೇರಿದಂತೆ ಅಪ್ಪಚ್ಚುರಂಜನ್, ದಿನೇಶ್ ಗುಂಡುರಾವ್ ಅವರಿಗೆ
ಕುಶಲಸಿರಿ ಪ್ರಶಸ್ತಿ ನೀಡ ಗೌರವಿಸಲಾಯಿತು.
ಬಾಕ್ಸ್: ಕೊಡಗು ವಿವಿ ಉಳಿವಿಗೆ ತಾನು ಕೂಡ ಸಹಮತ ನೀಡಲಿದ್ದೇನೆ.ಹಲವು ವಿವಿಗಳು ಸಮರ್ಪಕವಾಗಿ ನಡೆಯದೆ ವಿಲೀನಗೊಳಿಸಲು ಬೇಡಿಕೆಯಿಟ್ಟಿದ್ದಾರೆ. ಆದರೆ ಕೊಡಗಿನ ಶಾಸಕರಾದಿಯಾಗಿ, ಜನತೆ ಕೊಡಗು ವಿವಿ ಉಳಿಸಲು ಬೇಡಿಕೆಯಿಟ್ಟಿದ್ದಾರೆ. ಜನರ ಅಭಿಪ್ರಾಯದಂತೆ ತಾವು ಕಾರ್ಯನಿರ್ವಹಿಸಬೇಕಿರುವ ಹಿನ್ನಲೆಯಲ್ಲಿ ಕೊಡಗು ವಿವಿ ಉಳಿವಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆಯಲಿದ್ದೇನೆ ಎಂದು ತಿಳಿಸಿದರು.
ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೆ ಮುನ್ನ
ಕೊಡಗು-ಮೈಸೂರು ಗಡಿಯಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿ ಮೆರವಣಿಗೆ ಗೆ ಚಾಲನೆ ನೀಡಲಾಯಿತು. ಡೋಲು ಬಾರಿಸುವ ಮೂಲಕ ತಹಸೀಲ್ದಾರ್ ಕಿರಣ್ ಗೌರಯ್ಯ, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಚಾಲನೆ ನೀಡಿದರು.
ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರು ಹಾಗೂ ಚಂಡೆವಾದ್ಯ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿಗಳಾದ
ದಿ.ಗುಂಡುರಾವ್ ಹಾಗೂ ದಿ.ವೀರೇಂದ್ರ ಪಾಟೀಲ್ ರವರ ಭಾವಚಿತ್ರ ಒಳಗೊಂಡ ಬೆಳ್ಳಿರಥದ ಮೆರವಣಿಗೆ ಸಭಾಂಗಣದವರೆಗೆ ಸಾಗಿ ಬಂತು. ನೀರು ಬಳಕೆದಾರರ ಸಂಘಗಳು, ಜೂನಿಯರ್ ಕಾಲೇಜಿನ ಎನ್.ಸಿ.ಸಿ ತಂಡ, ಧರ್ಮಸ್ಥಳ ಸಂಘ ಹಾಗೂ ವಿವಿಧ ಸಂಘಸಂಸ್ಥೆ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ವಿವಿಧ ದ್ವಾರಗಳ ಉದ್ಘಾಟನೆ: ಸಭಾಂಗಣ ಆವರಣದಲ್ಲಿ ನಿರ್ಮಿಸಿದ್ದ ವಿವಿಧ ದ್ವಾರಗಳ ಉದ್ಘಾಟನೆ ಮಾಡಲಾಯಿತು.
ದಿ.ಮೈಲಾರ ಶೆಟ್ಟಿ ದ್ವಾರವನ್ನು ಉದ್ಯಮಿ ಬಿ.ಆರ್.ನಾಗೇಂದ್ರಪ್ರಸಾದ್, ದಿ.ವರದರಾಜಶೆಟ್ಟಿ ದ್ವಾರವನ್ನು ಉದ್ಯಮಿ ಎಸ್.ಕೆ.ಸತೀಶ್, ದಿ.ವಿ
ಎಸ್.ರಾಮಕೃಷ್ಣ ಪುಸ್ತಕ ಮಳಿಗೆಯನ್ನು ನಿವೃತ್ತ ಶಿಕ್ಷಕ ನಜೀರ್ ಅಹಮ್ಮದ್, ಉದ್ಘಾಟಿಸಿದರು.
ಕವಿಗೋಷ್ಠಿ: ಶ್ರೀ ವೀರೇಂದ್ರ ಪಾಟೀಲ್ ಸಭಾಂಗಣ ಪರ್ಯಾಯ ವೇದಿಕೆಯಲ್ಲಿ ಶಕ್ತಿ ದಿನಪತ್ರಿಕೆ ಉಪಸಂಪಾದಕ ಕುಡೇಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಸುವರ್ಣ ಸಂಭ್ರಮ ಕವಿಗೋಷ್ಠಿಯನ್ನು ಮೈಸೂರಿನ ಪೀಪಲ್ಸ್ ಪಾರ್ಕ್ ಪ.ಪೂ.ಕಾಲೇಜು ಪ್ರಾಂಶುಪಾಲ ಪಿ.ಎಸ್.ಜಾನ್ ಉದ್ಘಾಟಿಸಿದರು. ಕವಿಗಳಾದ ನ.ಲ.ವಿಜಯ, ಪುಷ್ಪ ಶಿವರಾಮ ರೈ, ಡಾ.ಎ.ಎಸ್.ಪೂವಮ್ಮ, ಶರ್ಮಿಳ ರಮೇಶ್ ಇದ್ದರು.
ಕನ್ಮಡ ಸಿರಿ ಸ್ನೇಹ ಬಳಗದ ಎಂ.ಡಿ.ರಂಗಸ್ವಾಮಿ, ಕೆ.ಕೆ.ನಾಗರಾಜಶೆಟ್ಟಿ, ಕೆ.ಎಸ್.ಕೃಷ್ಣೇಗೌಡ, ಪಾಂಡುರಂಗ, ಆವರ್ತಿಮಹದೇವಪ್ಪ ಮತ್ತಿತರರು ಇದ್ದರು.
Back to top button
error: Content is protected !!