ಕುಶಾಲನಗರ, ಫೆ 23: ಕುಶಾಲನಗರ ತಾಲೂಕಿನ ತೊರೆನೂರು ವಿರಕ್ತ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ 13ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ, ಶ್ರೀ ತಪೋಕ್ಷೇತ್ರ ಮನೆಹಳ್ಳಿ ಶ್ರೀ ಗುರು ಸಿದ್ದ ವೀರೇಶ್ವರ ಸ್ವಾಮೀಜಿ ಪೂಜಾ ಕಾರ್ಯಕ್ರಮ ಭಾನುವಾರ ತೊರೆನೂರು ವಿರಕ್ತ ಮಠದಲ್ಲಿ ನಡೆಯಿತು.
ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಮಠದ ಆವರಣದಲ್ಲಿರುವ ಲಿಂಗೈಕ್ಯ ಸ್ವಾಮಿಗಳ ಗದ್ದುಗೆಗೆ ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಪೂಜಾ ಕೈಂಕರ್ಯಗಳು ಜರುಗಿದವು.
ಪೂಜೋತ್ಸವ ನಂತರ ಪಾಲ್ಗೊಂಡ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ, ಮಠ ಹಾಗೂ ಭಕ್ತರ ನಡುವಿನ ಸಂಬಂಧ ವೃದ್ದಿಗೊಳಿಸಲು ಮಠದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಆಶೀರ್ವಚನ ನೀಡಿದ ಮನೆಹಳ್ಳಿ ಶ್ರೀ ತಪೋವನ ಕ್ಷೇತ್ರದ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಮನೆ, ಮಠದ ಬಗ್ಗೆ ಜಾಗೃತಿ ಅಗತ್ಯ. ಅನಾವಶ್ಯಕ ವಿಚಾರಗಳನ್ನು ಬದಿಗೊತ್ತಿ ಧಾರ್ಮಿಕ ಕೈಂಕರ್ಯಗಳಿಗೆ ಒತ್ತು ನೀಡಬೇಕು. ಸಮುದಾಯ ಬಾಂಧವರು ಮಠದ ಅಭಿವೃದ್ಧಿ, ಸೇವಾ ಕಾರ್ಯಗಳಿಗೆ ಕೈಜೋಡಿಸಬೇಕಿದೆ. ಮಠಕ್ಕಾಗಿ ಸಮಯ ಮೀಸಲಿಡಿ ಎಂದು ಕರೆ ನೀಡಿದರು.
ತೊರೆನೂರು ವಿರಕ್ತ ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ಮಠದ ಅಭಿವೃದ್ಧಿ ಹಾಗೂ ಸೇವೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಸಮಾಜ ಬಾಂಧವರ ಕೊಡುಗೆ ಮಾತ್ರವಿದೆ. ಎಲ್ಲರೂ ಕೂಡ ಮಠದ ಬಗ್ಗೆ ಆಸಕ್ತಿ ವಹಿಸಬೇಕಿದೆ. ಮಠದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬೆಟ್ಟದಪುರದ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಹಾಗೂ ತೊರೆನೂರು ಗ್ರಾಮದ ಮುಖಂಡ ಕೆ.ಎಸ್.ಕೃಷ್ಣೇಗೌಡ ಮಾತನಾಡಿದರು.
ಇದೇ ಸಂದರ್ಭ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುನಿತಾ ಮಹೇಶ್ ಹಾಗೂ ಮಲ್ಲೇಶ ಸ್ವಾಮೀಜಿ ಅವರನ್ನು ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ,
ಚಿಲುಮೆ ಮಠದ ಜಯದೇವ ಸ್ವಾಮೀಜಿ,
ದಿಂಡು ನ ಅಪ್ಪಾಜಿ ಸ್ವಾಮೀಜಿ,
ಶಿರದನಹಳ್ಳಿ ಮಠದ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ತೇಜೂರು ಮಠದ ಕಲ್ಯಾಣ ಸ್ವಾಮೀಜಿ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ಖಜಾಂಚಿ ಉದಯಕುಮಾರ್, ತಾಲೂಕು ಅಧ್ಯಕ್ಷ ಹೆಚ್.ಎಂ.ಮಧುಸೂದನ್ ಸೇರಿದಂತೆ ನಿರ್ದೇಶಕರುಗಳು, ಪ್ರಮುಖರು ಇದ್ದರು.

Back to top button
error: Content is protected !!