ಕುಶಾಲನಗರ, ಫೆ 20: ನಂಜರಾಯಪಟ್ಟಣ ಗ್ರಾಪಂ ಕಛೇರಿ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ,
ನೂತನ ಸಭಾಂಗಣಕ್ಕೆ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಗ್ರಾಮಪಂಚಾಯಿತಿ ಗ್ರಾಮದ ದೇವಾಲಯವಿದ್ದಂತೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಂಚಾಯಿತಿ ಜನಪ್ರತಿನಿಧಿಗಳು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಪಂಚಾಯಿತಿ ಮಾದರಿ ಪಂಚಾಯಿತಿಯಾಗಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ನಿರಂತರವಾಗಿದೆ. ಸಭೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೂರದೃಷ್ಟಿಯ ಚಿಂತನೆಯೊಂದಿಗೆ ರೂ 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ. ನೂತನ ಸಭಾಂಗಣದಲ್ಲಿ ಪ್ರಥಮವಾಗಿ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಗ್ರಾಮಪಂಚಾಯಿತಿ ಅಂಗಡಿ ಮಳಿಗೆಗಳು, ದುಬಾರೆ ಪಾರ್ಕಿಂಗ್ ಸೇರಿದಂತೆ ಕೃಷಿ ಜಮೀನುಗಳ ಹರಾಜು ಪ್ರಕ್ರಿಯೆ ಮೂಲಕ ಪಂಚಾಯಿತಿಗೆ ಒಂದೂಕಾಲು ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ಈ ಮೂಲಕ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಜನಾಂಗದ ಏಳಿಗೆಗೆ, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಆರ್.ಕೆ.ಚಂದ್ರ, ರಕ್ಷಿತ್ ಮಾವಾಜಿ, ಸಮೀರಾ, ಗಿರಿಜಮ್ಮ, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ ಇದ್ದರು.
Back to top button
error: Content is protected !!