ಸಾಂಸ್ಕೃತಿಕ

ಕುಶಾಲನಗರದಲ್ಲಿ ನಡೆದ ಅರೆಭಾಷೆ ಗೌಡ ಸಾಂಸ್ಕೃತಿಕ ಕಾರ್ಯಕ್ರಮ

ಕುಶಾಲನಗರ, ಫೆ 16: ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ನಮ್ಮ ಶ್ರೀಮಂತ ಸಂಸ್ಕೃತಿ ಪ್ರದರ್ಶನ ಮೂಲಕ ಜೀವಂತಿಕೆ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಅಭಿಪ್ರಾಯಪಟ್ಟರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುಶಾಲನಗರದ ಗೌಡ ಮಹಿಳಾ ಸ್ವಸಹಾಯ ಸಂಘ ಮತ್ತು ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕುಶಾಲನಗರದಲ್ಲಿ ಭಾನುವಾರ ನಡೆದ
ಅರೆಭಾಷೆ ಗೌಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕೊಡಗು ಬಹು ಸಂಸ್ಕೃತಿಯ ಜಿಲ್ಲೆ. ಇಲ್ಲಿ ಒಕ್ಕಲಿಗರು ಆಡುವ ಅರೆಭಾಷೆ ಎಂದರೆ ಅದು ಅರ್ಧ ಭಾಷೆ ಅಲ್ಲ. ಹಳೆಯ ಭಾಷೆ ಎಂದರ್ಥ. ಅರೆಭಾಷೆ ಪೂರ್ಣಪ್ರಮಾಣದಲ್ಲಿ ಆಡುವ ಭಾಷೆ. ವಿದ್ವಾಂಸರು ಗೌಡ ಕನ್ನಡ ಎಂದು ಗುರುತಿಸುವ ಭಾಷೆ ಇದು.
ಭಾಷೆ ಬಳಸಿದರೆ ಬದುಕುತ್ತದೆ, ಬೆಳೆಯುತ್ತದೆ. ಭಾಷೆ ಜತೆ ಸಂಸ್ಕ ತಿಯೂ ಇರುತ್ತದೆ. ಭಾಷೆ ಇಲ್ಲದಿದ್ದರೆ ಸಂಸ್ಕೃತಿಯೂ ಇರುವುದಿಲ್ಲ. ಅರೆಭಾಷಿಕ ಒಕ್ಕಲಿಗರು ಬಳಸುವ ಐನ್‌ಮನೆಯ ಮೂಲ ಪದ ಅಯ್ಯನ ಮನೆ ಆಗಿದೆ. ಅಂದರೆ ಅದು ಹಿರಿಯರ ಮನೆ ಎಂದಾಗುತ್ತದೆ.
ಹಾಗಾಗಿ ಐನ್‌ಮನೆ ಎಂದು ಬಳಸಲು ಯಾವುದೇ ಹಿಂಜರಿಕೆ ಬೇಡ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸಂದೀಪ್ ಪೊಳಕಂಡ ಮಾತನಾಡಿ ಹಿಂದಿನ ದಿನಗಳಿಗೆ ಹೋಲಿಸಿದರೆ ಜನಾಂಗ ಇಂದು ಅಭಿವೃದ್ಧಿ ಸಾಧಿಸಿದೆ. ಅಕಾಡೆಮಿ ಮೂಲಕ ಸಾಂಸ್ಕೃತಿಕ ಬೆಳವಣಿಗೆ ನಡೆಯುತ್ತಿದೆ. ಅಕಾಡೆಮಿ ಸ್ಥಾಪನೆ ಹಿಂದೆ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಅಂದು ಸ್ಪೀಕರ್ ಆಗಿದ್ದ ಕೆ.ಜಿ. ಬೋಪಯ್ಯ ಕೊಡುಗೆ ಸ್ಮರಣೀಯ. ಅರೆಭಾಷೆ ಗಡಿ ಉತ್ಸವ ಮೂಲಕ ಅಕಾಡೆಮಿ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಾ. 2ಕ್ಕೆ ಕುಶಾಲನಗರದಲ್ಲಿ ಗಡಿ ಉತ್ಸವ ನಡೆಸಲಾಗುತ್ತಿದೆ. ಸ್ಥಳೀಯವಾಗಿ ಆಯೋಜನೆ ಆಗುವ ಚಿಕ್ಕ ಚಿಕ್ಕ ಕಾರ್ಯಕ್ರಮಗಳು ದೊಡ್ಡ ವೇದಿಕೆ ಒದಗಿಸಲು ಸಹಕಾರಿ. ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಅವಕಾಶ ಸಿಕ್ಕಿದಂತೆ ಆಗುತ್ತದೆ. ಅಕಾಡೆಮಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕವೂ ನಡೆಸುವ ಯೋಚನೆ ಇದೆ. ಇದರಿಂದ ವಿಶ್ವದಾದ್ಯಂತ ಇರುವ ಅರೆಭಾಷಿಕರು ಕಾರ್ಯಕ್ರಮ ನೋಡಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಚೆರಿಯಮನೆ ರಶಿ ಹರೀಶ್ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ ದೇವಯ್ಯ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಪೊನ್ನಚ್ಚನ ಮೋಹನ್, ಕವಿತಾ ಮೋಹನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!