ಕುಶಾಲನಗರ, ಡಿ 28: ಕಾವೇರಿ ನದಿ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಯುವ ಬ್ರಿಗೇಡ್ ಕಾರ್ಯಕರ್ತರ ‘ಕಾವೇರಿ ನಮನ’ ಬೈಕ್ ರ್ಯಾಲಿ ತಂಡ ಶನಿವಾರ ಜಿಲ್ಲೆಗೆ ಆಗಮಿಸಿತು.
ಯುವ ಬ್ರಿಗೇಡ್ ಮಾರ್ಗದರ್ಶಕರಾದ
ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಶ್ರೀರಂಗಪಟ್ಟಣದಿಂದ ಚಾಲನೆಗೊಂಡ ಸುಮಾರು 100 ಕ್ಕೂ ಅಧಿಕ ಸ್ವಯಂಸೇವಕರು 50 ಕ್ಕೂ ಅಧಿಕ ಬೈಕ್ ಗಳಲ್ಲಿ ರಾಮನಾಥಪುರ ಮೂಲಕ ಕುಶಾಲನಗರಕ್ಕೆ ಸಂಜೆ ಆಗಮಿಸಿದರು.
ಈ ಸಂದರ್ಭದಲ್ಲಿ ಕುಶಾಲನಗರ ಗಡಿಭಾಗದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಬರಮಾಡಿಕೊಂಡರು.
ಕುಶಾಲನಗರ ಕೊಪ್ಪ ಬಳಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಯುವ ಬ್ರಿಗೇಡ್ ಮಾರ್ಗದರ್ಶಕರು ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಕುಶಾಲನಗರ ವಿವೇಕಾನಂದ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಂತರ ತಂಡ ಮಡಿಕೇರಿ ಮೂಲಕ ಭಾಗಮಂಡಲಕ್ಕೆ ತೆರಳಿತು.
ಭಾಗಮಂಡಲದಲ್ಲಿ ಸಂಜೆ ಸಂಗಮದಲ್ಲಿ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾವೇರಿ ನಮನ ಹೆಸರಿನಲ್ಲಿ ಮೂರು ದಿನಗಳ ಕಾಲ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಡೆಯುವ ಕಾವೇರಿ ಜಾಗೃತಿ ಅಭಿಯಾನದಲ್ಲಿ ಯುವ ಬ್ರಿಗೇಡ್ ತಂಡದ ಸದಸ್ಯರು (ಇಂದು) ಭಾನುವಾರ ಬೆಳಗ್ಗೆ ಭಾಗಮಂಡಲ ಸಂಗಮ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಿದ್ದಾರೆ. ಕಾರ್ಯಕ್ರಮ ಸಂಯೋಜಕರಾದ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 100 ಕ್ಕೂ ಅಧಿಕ ಸ್ವಯಂಸೇವಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಮೂರು ದಿನಗಳ ಕಾಲ ಕಾವೇರಿ ನದಿ ತಟದ ವಿವಿಧ ಕಡೆ ಜೀವನದಿಗೆ ಮಹಾ ಆರತಿ ಬೆಳಗುವುದು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಮತ್ತು ಜನರಲ್ಲಿ ನದಿ ಸ್ವಚ್ಛತೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ ತಲಕಾವೇರಿ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿ ಸ್ಥಳೀಯವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ನಂತರ ಕುಶಾಲನಗರಕ್ಕೆ ಬೈಕ್ ರ್ಯಾಲಿ ಬೆಳಗ್ಗೆ 10 ಗಂಟೆಗೆ ತಲುಪಿ
ಕುಶಾಲನಗರ -ಕೊಪ್ಪ ಗಡಿಭಾಗದ ಕಾವೇರಿ ಸೇತುವೆ ಕೆಳಭಾಗದಲ್ಲಿ ಕಾವೇರಿ ನದಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಸ್ವಯಂಸೇವಕರು ನಂತರ ಜಿಲ್ಲೆಯಿಂದ ಹುಣಸೂರು ಮೂಲಕ ಹೆಚ್‍ಡಿ ಕೋಟೆ ತೆರಳಲಿದ್ದಾರೆ. ಮೂರನೇ ದಿನ ರ್ಯಾಲಿ ಸುತ್ತೂರು ತಲುಪಿ ಸಮಾರೋಪಗೊಳ್ಳಲಿದೆ.
Back to top button
error: Content is protected !!