ಕುಶಾಲನಗರ ನ.19 : ಕುಶಾಲನಗರದ ಐತಿಹಾಸಿಕ ದೇವಾಲಯ ಶ್ರೀ ಮಹಾಗಣಪತಿ ದೇವರ ವಾರ್ಷಿಕ 103ನೇ ರಥೋತ್ಸವ ಮಂಗಳವಾರ
ಸಾವಿರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ದೇವಾಲಯದ ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯ ಸಮಿತಿ ವತಿಯಿಂದ ಬೆಳಗಿನಿಂದಲೇ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ ರುದ್ರಾಭಿಷೇಕ, ಪುಷ್ಪಾಲಂಕಾರ, ರಥ ಪೂಜೆ, ರಥ ಬಲಿ ನಂತರ ಗಣಪತಿ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಧ್ಯಾಹ್ನ 1.30 ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತಾದಿಗಳು ರಥ ಬೀದಿಯ ಮೂಲಕ ಆಂಜನೇಯ ದೇವಾಲಯ ತನಕ ಭಕ್ತಿ ಘೋಷಣೆಗಳೊಂದಿಗೆ ರಥವನ್ನು ಎಳೆದರು.
ರಥಕ್ಕೆ ಚಾಲನೆ ನೀಡುವ ಮುನ್ಮ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರಥದ ಮುಂದೆ ಓಂ ಆಕಾರದಲ್ಲಿ ಕರ್ಪೂರ ಆರತಿ ಬೆಳಗಿಸಿ ಸ್ವಾಮಿಯ ಘೋಷ ಮೊಳಗಿಸಿದರು. ಹರಕೆ ಹೊತ್ತ ಭಕ್ತರು ನೂರಾರು ಸಂಖ್ಯೆಯಲ್ಲಿ ಈಡುಗಾಯಿ ಅರ್ಪಿಸಿದರು.
ದೇವಾಲಯದ ಪ್ರಧಾನ ಅರ್ಚಕ ಆರ್. ಕೆ ನಾಗೇಂದ್ರ ಬಾಬು ನೇತೃತ್ವದಲ್ಲಿ ಅರ್ಚಕರ ತಂಡದಿಂದ ಪೂಜಾ ವಿಧಿ ವಿಧಾನಗಳು ಜರಗಿದವು.
ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಗ್ರಾಮಗಳ, ನೆರೆ ಜಿಲ್ಲೆಗಳ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
ಜಾತ್ರೋತ್ಸವ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿತ್ತು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಅವರು ದೇವಾಲಯಕ್ಕೆ ಆಗಮಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಶ್ರೀ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷರಾದ ಎಂ ಕೆ ದಿನೇಶ್ ರಥೋತ್ಸವ ಅದ್ದೂರಿಯಾಗಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ರಥೋತ್ಸವದ ಅಂಗವಾಗಿ ಸಮಿತಿ ಮೂಲಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಗಿದೆ ಎಂದು ಹೇಳಿದರು.
ಗೋ ಜಾತ್ರೆ ಮತ್ತು ಕೃಷಿ ಮೇಳ ಡಿಸೆಂಬರ್ 7 ರಿಂದ 3 ದಿನಗಳ ಕಾಲ ನಡೆಯುತ್ತದೆ ಎಂದು ತಿಳಿಸಿದರು.
ದೇವಾಲಯ ಪ್ರಧಾನ ಅರ್ಚಕ ಆರ್. ಕೆ ನಾಗೇಂದ್ರ ಬಾಬು ಮಾತನಾಡಿ, ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. 400 ವರ್ಷ ಪುರಾತನ ಈ ದೇವಾಲಯವನ್ನು ಜಾತ್ರೋತ್ಸವ ಆಧಾರದಲ್ಲಿ ಇದು 103ನೇ ವರ್ಷದ ಜಾತ್ರಾ ಮಹೋತ್ಸವ ಎಂದು ಮಾಹಿತಿ ನೀಡಿದರು.
ಈ ಬಾರಿ ಪ್ರತಿ ದಿನ ಉತ್ಸವಾದಿಗಳನ್ನು ವಿಶೇಷ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ದೇವಾಲಯ ಸೇವಾ ಸಮಿತಿಯ ಅಧ್ಯಕ್ಷ ಎಂ.ಕೆ. ದಿನೇಶ್, ಉಪಾಧ್ಯಕ್ಷ ಆರ್ ಬಾಬು, ಗೌರವಾಧ್ಯಕ್ಷ ವಿ.ಎನ್. ವಸಂತಕುಮಾರ್, ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಖಜಾಂಚಿ ಎಸ್. ಕೆ. ಸತೀಶ್, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್, ನಿರ್ದೇಶಕರಾದ ವಿ.ಡಿ. ಪಂಡರಿಕಾಕ್ಷ, ಹೆಚ್.ಎಂ. ಚಂದ್ರು, ಟಿ. ಆರ್. ಶರವಣಕುಮಾರ್ ಮತ್ತು ವಿಶೇಷ ಆಹ್ವಾನಿತರಾದ ಹೆಚ್.ಎನ್. ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್. ನಾಗೇಂದ್ರ, ಡಿ.ಸಿ. ಜಗದೀಶ್, ಕೆ. ಎನ್. ಸುರೇಶ್, ಕೆ.ಸಿ. ನಂಜುಂಡಸ್ವಾಮಿ, ಮುನಿಸ್ವಾಮಿ, ವಿ. ಎಸ್. ಆನಂದಕುಮಾರ್ ವ್ಯವಸ್ಥಾಪಕರಾದ ಎಸ್. ಕೆ. ಶ್ರೀನಿವಾಸ್ ರಾವ್ ಇದ್ದರು.
ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತರಿಗೆ ಅನ್ನದಾನ ನೆರವೇರಿಸಿದರು.
ರಥೋತ್ಸವದ ನಂತರ ಗುಂಡುರಾವ್ ಬಡಾವಣೆಯಲ್ಲಿ ಜಾತ್ರೆಯನ್ನು ಶಾಸಕ ಮಂತರ್ ಗೌಡ ಉದ್ಘಾಟಿಸಿದರು.
ಗಣಪತಿ ರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಗೆಳೆಯರ ಬಳಗದಿಂದ ದಸರಾ ಮಾದರಿಯಲ್ಲಿ ಪಟ್ಟಣದಲ್ಲಿ ವಿದ್ಯುತ್ ಅಲಂಕಾರ ಹಾಗೂ ಜಾತ್ರೋತ್ಸವ ಏರ್ಪಡಿಸಿರುವುದು ವಿಶೇಷವಾಗಿದೆ ಎಂದು ಶ್ಲಾಘಿಸಿದರು.
Back to top button
error: Content is protected !!