ಕುಶಾಲನಗರ, ನ 18: ಕುಶಾಲನಗರ ನಗರ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಜೋಸೆಫ್ ವಿಕ್ಟರ್ ಸೋನ್ಸ್ ಸೋಮವಾರ ಅಧಿಕಾರ ವಹಿಸಿಕೊಂಡರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಒಬ್ಬರಿಗೆ ಒಂದೇ ಹುದ್ದೆ ಎಂಬಂತೆ ಪಕ್ಷದಲ್ಲಿ ದುಡಿದ ಅರ್ಹರಿಗೆ ಅಧಿಕಾರ ಒದಗಿ ಬರಲಿದೆ. ಪಕ್ಷದಲ್ಲಿ ಅಧಿಕಾರ ಹೊಂದುವವರಿಗೆ ಇತರರು ಅಗತ್ಯ ಸಹಕಾರ ನೀಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಮುಂದಾಗಬೇಕಿದೆ. ನೂತನ ಅಧ್ಯಕ್ಷರು ಯಾರನ್ನೂ ಕಡೆಗಣಿಸದೆ ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಸೇವೆ ಸಲ್ಲಿಸುವಂತಾಗಬೇಕಿದೆ ಎಂದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ
ವಿ.ಪಿ.ಶಶಿಧರ್ ಮಾತನಾಡಿ, ತಾಲೂಕಿನ ಶೇ. 20 ರಷ್ಟು ಬೂತ್ ಕುಶಾಲನಗರ ಒಳಗೊಂಡಿದೆ. 5 ಕಿಮೀ ವ್ಯಾಪ್ತಿಯಲ್ಲಿ 55 ರಿಂದ 60 ಸಾವಿರ ಮತದಾರರಿದ್ದಾರೆ. ಈ ಹಿನ್ನಲೆಯಲ್ಲಿ ಕುಶಾಲನಗರ ರಾಜಕೀಯವಾಗಿ ಮಹತ್ವಪೂರ್ಣ ಆಯಕಟ್ಟಿನ ಪ್ರದೇಶವಾಗಿದೆ. ಈ ಹಿಂದೆ ಪಕ್ಷ ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿರುವ ಜೋಸೆಫ್ ವಿಕ್ಟರ್ ಸೋನ್ಸ್ ಅವರ ಅನುಭವ ಪಕ್ಷ ಸಂಘಟನೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರೂ ಆದ ನಿರ್ಗಮಿತ ನಗರಾಧ್ಯಕ್ಷ ಪ್ರಮೋದ್ ಮುತ್ತಪ್ಪ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ತನ್ನ ಅವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.
ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮಾತನಾಡಿ, ಈ ಹಿಂದೆ 9 ವರ್ಷಗಳ ಕಾಲ ನಿರಂತರವಾಗಿ ನಗರ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಅಂದು ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಎಲ್ಲರ ಸಮಸ್ಯೆಗಳಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಕುಶಾಲನಗರ ಪುರಸಭೆ ಅಧ್ಯಕ್ಷರು, ಯೋಜನಾ ಪ್ರಾಧಿಕಾರ ಅಧ್ಯಕ್ಷರು, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗಾದಿಯಲ್ಲಿ ಕಾಂಗ್ರೆಸಿಗರಿರುವ ಕಾರಣ ಇದನ್ನು ಸದ್ಬಳಕೆ ಮಾಡಿಕೊಂಡು ನ್ಯಾಯೋಚಿತವಾದ, ಕಾನೂನು ಚೌಕಟ್ಟಿನೊಳಗೆ ಬರುವ ಬೇಡಿಕೆಗಳಿಗೆ ತಾನು ಸದಾ ಸ್ಪಂದಿಸಲಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ದಿನೇಶ್, ಶಿವಶಂಕರ್, ನವೀನ್ ಗೌಡ, ಜಯಲಕ್ಷ್ಮಮ್ಮ, ಕಲೀಮುಲ್ಲಾ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಕುಡಾ ಸದಸ್ಯ ಕಿರಣ್, ಶಾಜಿ, ವಿವಿಧ ಘಟಕಗಳ ಪ್ರಮುಖರಾದ ಟಿ.ಪಿ.ಹಮೀದ್, ಅರುಣ್ ರಾವ್, ಅಬ್ದುಲ್ ರಜಾಕ್, ರಮೇಶ್, ಶಿವಕುಮಾರ್ ಸೇರಿದಂತೆ ಕಾರ್ಯಕರ್ತರು ಇದ್ದರು.
Back to top button
error: Content is protected !!