ಕುಶಾಲನಗರ, ನ 13: ಕೂಡಿಗೆ ಗ್ರಾಪಂನ 2024-25ನೇ ಸಾಲಿನ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಆಲೂರು ಸಿದ್ದಾಪುರದಿಂದ ಹಳೆ ಕೂಡಿಗೆಗೆ ಸ್ಥಳಾಂತರಗೊಂಡ ಮದ್ಯದಂಗಡಿ ಸಂಬಂಧ ಪರ-ವಿರೋಧ ಚರ್ಚೆ ಸಭೆಯ ಬಹುಪಾಲು ಸಮಯ ವ್ಯರ್ಥಗೊಳಿಸಿದ್ದು ಕಂಡುಬಂತು. ಆರಂಭದಲ್ಲಿ ಬೆರಳೆಣಿಕೆಯ ಇಲಾಖೆ ಅಧಿಕಾರಿಗಳು ಮಾತ್ರ ಸಭೆ ಆಗಮಿಸಿ ಉಳಿದವರ ಗೈರು ಹಾಜರಿ ಬಗ್ಗೆ ಸಭೆಯಲ್ಲಿದ್ದವರು ಅಸಮಾಧಾನ ವ್ಯಕ್ತಪಡಿಸಿದರು.
ಪಾಲ್ಗೊಂಡಿದ್ದ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ನಡುವೆ ಅಬಕಾರಿ ಇಲಾಖೆ ಅಧಿಕಾರಿಯ ಲೋಕೇಶ್ ಸರದಿ ಸಂದರ್ಭ ಮದ್ಯದಂಗಡಿ ಸ್ಥಳಾಂತರ ವಿಚಾರ ತೀವ್ರ ಚರ್ಚೆ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.
ಹೆದ್ದಾರಿ ಬದಿಯಲ್ಲಿ
ಒಂದೆಡೆ ಶಾಲೆ ಮತ್ತೊಂದೆಡೆ ಎಸ್.ಸಿ,ಎಸ್.ಟಿ ಕಾಲನಿ ಇದ್ದರೂ ಮದ್ಯದಂಗಡಿ ಆರಂಭಿಸಲಾಗಿದೆ. ಈ ಬಗ್ಗೆ ಕೆಲವರು ಆಕ್ಷೇಪಣೆ ಸಲ್ಲಿಸಿದರೂ ಕೂಡ ಯಾವುದೇ ಕ್ರಮವಹಿಸದ ಕಾರಣ ಮದ್ಯದಂಗಡಿ ಆರಂಭಗೊಂಡಿದೆ ಎಂದು ಮದ್ಯದಂಗಡಿ ವಿರೋಧಿಸಿ ಕೆಲವು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು.
ಒಂದೇ ಮದ್ಯದಂಗಡಿಗೆ ಎರೆಡೆರೆಡು ಬಾರಿ ಗ್ರಾಮಪಂಚಾಯಿತಿಯಿಂದ ಎನ್.ಒ.ಸಿ ನೀಡಲಾಗಿದೆ. ಮದ್ಯದಂಗಡಿಗೆ ಆಕ್ಷೇಪ ಸಲ್ಲಿಸಿ ಎಸ್.ಸಿ, ಎಸ್.ಟಿ.ಕಾಲನಿ ಕೆಲವು ನಿವಾಸಿಗಳು ಪಂಚಾಯಿತಿಗೆ ಪತ್ರ ನೀಡಿದ್ದರೂ ಸೂಕ್ತವಾಗಿ ಪರಿಶೀಲಿಸದೆ, ಆಡಳಿತ ಮಂಡಳಿಯ ಗಮನಕ್ಕೂ ಬಾರದಂತೆ ಪಿಡಿಒ ಹಾಗೂ ಕಾರ್ಯದರ್ಶಿ ಎನ್.ಒ.ಸಿ ನೀಡಿದ್ದಾರೆ ಎಂದು ಉದ್ಯಮಿ ಬಿ.ಡಿ.ಅಣ್ಣಯ್ಯ ಆರೋಪಿಸಿದರು.
ಹಳೆ ಕೂಡಿಗೆ ಮದ್ಯದಂಗಡಿ ತೆರವುಗೊಳಿಸುವುದಾದರೆ
ಕೂಡಿಗೆಯ ಹಾರಂಗಿ ನದಿ ಸಮೀಪ ಇರುವ ಮದ್ಯದಂಗಡಿ ಹಾಗೂ ಮದಲಾಪುರದ ಗಿರಿಜನ ಪುನರ್ವಸತಿ ಶಿಬಿರದ ಬಳಿ ಇರುವ ಮದ್ಯದಂಗಡಿಗಳನ್ನು ಕೂಡ ರದ್ದುಗೊಳಿಸುವಂತೆ ರಾಜು, ಪುಟ್ಟ, ವೆಂಕಟೇಶ್ ಮತ್ತಿತರರು ಆಗ್ರಹಿಸಿದರು.
ಇದೇ ವಿಚಾರ ತೀವ್ರ ಸಮಯ ಚರ್ಚೆ ನಡೆಯಿತು. ಆಡಳಿತ ಮಂಡಳಿ ಗಮನಕ್ಕೆ ಬಾರದೆ ಎನ್.ಒ.ಸಿ.ನೀಡಿರುವ ಪಿಡಿಒ ಕ್ರಮದ ವಿರುದ್ದ ಕಾಂತರಾಜು ಮತ್ತಿತರರು ತೀವ್ರ ಆಕ್ರೋಷ ವ್ಯಕ್ತಪಡಿಸಿದರು.
ಮನಬಂದಂತೆ ಎನ್.ಒ.ಸಿ ನೀಡಿ ಗ್ರಾಮಸ್ಥರ ನಡುವೆ ಒಡಕು ಮೂಡಿಸುತ್ತಿರುವ ಪಿಡಿಒ ಅವರಿಂದ ಗ್ರಾಮದ ಅಭಿವೃದ್ಧಿ ಸಾಧ್ಯವಿಲ್ಲ. ಕೂಡಲೆ ಇವರನ್ನು ವರ್ಗಾಯಿಸಲು ಕ್ರಮವಹಿಸುವಂತೆ ಅಣ್ಣಯ್ಯ, ಕಾಂತರಾಜು ಸಭೆಯಲ್ಲಿ ಆಗ್ರಹಿಸಿದರು.
ಮದ್ಯದಂಗಡಿಗೆ ಎನ್.ಒ.ಸಿ ನೀಡಿರುವ ವಿಚಾರದ ಸಂಬಂಧ ಅಧ್ಯಕ್ಷ ಗಿರೀಶ್ ಸಮಜಾಯಿಷಿಕೆ ನೀಡಿದರು. ಎಲ್ಲವನ್ನೂ ಸೂಕ್ತವಾಗಿ ಪರಿಶೀಲಿಸಿ ನಿರಾಕ್ಷೇಪಣ ಪತ್ರ ನೀಡುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮಸ್ಥರ ನಡುವೆಯೇ
ಮದ್ಯದಂಗಡಿ ಪರ, ವಿರೋಧ ಚರ್ಚೆ, ವಾಗ್ವಾದ ಏರ್ಪಟ್ಟ ಸಂದರ್ಭ ನೋಡಲ್ ಅಧಿಕಾರಿಯ ಉತ್ತರಕ್ಕೂ ಎದುರುನೋಡದೆ, ಅಬಕಾರಿ ಅಧಿಕಾರಿಗಳ ಮಧ್ಯಪ್ರವೇಶದಿಂದಲೂ ಪರಿಸ್ಥಿತಿ ತಿಳಿಯಾಗದ ಸಂದರ್ಭ
ಸಭೆಯಲ್ಲಿದ್ದ ಇತರೆ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬಸವಳಿದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯ ಕಸ ತುಂಬಿಸಿ ಸಾಗಿಸುವ ವಾಹನಗಳಿಗೆ ಪೆಟ್ರೋಲ್ ಬಂಕ್ ನಿಂದ ಸಾಲ ಪಡೆದು ಹಾಕಿಸಿದ ಡೀಸೆಲ್ ನ ಬಾಕಿ ಹಣ ನೀಡದಿದ್ದಕ್ಕೆ ಪಂಚಾಯಿತಿಯ ಗ್ರಾಮಸಭೆಗೆ ಬಂದು ಅಂಗಲಾಚಿ ಬೇಡಿದ ಪ್ರಸಂಗ ಕಂಡು ಬಂತು.
ಗ್ರಾಮಸಭೆಯಲ್ಲಿ
ಪೆಟ್ರೋಲ್ ಬಂಕ್ ಮಾಲಿಕ ಹಲಗಪ್ಪ ಅವರ ಮಗಳು ಡೀಸೆಲ್ ಹಾಕಿಸಿದ ಲೆಕ್ಕದ ಪುಸ್ತಕದೊಂದಿಗೆ ಸಭೆಗೆ ಬಂದು ಬಾಕಿ ಹಣ ಚುಪ್ತಾ ಮಾಡಬೇಕೆಂದು ಪರಿ ಪರಿಯಾಗಿ ಬೇಡಿದರು.
ಈ ಹಿಂದಿನ ಪಿಡಿಒ ಅವರು ಹಾಕಿಸಿದ ಡೀಸೆಲ್ ಬಾಕಿ ಹಣವನ್ನು ನಾನು ಪಾವತಿಸಲು ಬರಲ್ಲ ಎಂದು ಈಗಿನ ಪಿಡಿಒ ಸತಾಯಿಸುತ್ತಿರುವ ಬಗ್ಗೆಯೂ ಪೆಟ್ರೋಲ್ ಬಂಕ್ ಮಾಲೀಕರು ಅಳಲು ತೋಡಿಕೊಂಡರು.
ಈ ವೇಳೆ ಸಭೆಯಲ್ಲಿದ್ದ ಕೆಲ ಸಾರ್ವಜನಿಕರು, ಡೀಸೆಲ್ ಅನ್ನು ಪಂಚಾಯಿತಿಯ ಕಸ ತುಂಬುವ ವಾಹನಗಳು ಅಲ್ಲದೇ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿಗಳೂ ಕೂಡ ಅವರ ಖಾಸಗಿ ವಾಹನಗಳಿಗೆ ಹಾಕಿಸಿಕೊಂಡು ಪಂಚಾಯಿತಿ ಲೆಕ್ಕಕ್ಕೆ ಬರೆಸಿದ್ದಾರೆ.
ಬಾಕಿ ಹಣವನ್ನು ಪಡೆಯಲು ಬೇಡುವ ಪರಿಸ್ಥಿತಿ ಬೇಕಾ ? ಪಂಚಾಯಿತಿ ಆಡಳಿತ ಮಂಡಳಿಗೆ ಕಣ್ಣು ಕಿವಿ ಇಲ್ವಾ ಎಂದು ತರಾಟೆಗೆ ತೆಗೆದುಕೊಂಡ ಬಳಿಕ, ಸಭಾಧ್ಯಕ್ಷ ಗಿರೀಶ್ ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಪಾವತಿಸುವುದಾಗಿ ಹೇಳಿದರು.
ಉಳಿದಂತೆ ರಸ್ತೆ ಕಾಮಗಾರಿ, ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು, ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ಕೂಡಿಗೆ ವೃತ್ತದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಕೂಡಿಗೆ ಕೋಳಿ ಸಾಕಣಿಕೆ ಕೇಂದ್ರದ ಹಿರಿಯ ಪಶುವೈದ್ಯ ಡಾ.ಕೆ.ನಾಗರಾಜ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಅರುಣ್ ರಾವ್, ಟಿ.ಪಿ.ಹಮೀದ್, ಅನಂತ್, ಮಂಗಳ, ಕೆ.ಎಸ್.ಶಿವಕುಮಾರ್, ವಾಣಿ, ರತ್ನಮ್ಮ, ಹೆಚ್.ಎಸ್.ರವಿ, ಜಯಶೀಲಾ, ಪಿಡಿಒ ಮಂಜಳಾ, ಕಾರ್ಯದರ್ಶಿ ಪುನಿತ್ ಇದ್ದರು.
Back to top button
error: Content is protected !!