ಕುಶಾಲನಗರ, ನ 12: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಸಾಗಾಟ, ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಮಣ್ಣನ್ನು ಬಗೆದು ಸಾಗಿಸಿದ ಸಂಬಂಧ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿಕೊಂಡಿರುವುದು ಹಚ್ಚಹಸಿರಾಗಿರುವ ಬೆನ್ನಲ್ಲೇ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರಿನಲ್ಲಿ ಮಹಿಳೆಯೊಬ್ಬರಿಗೆ ಸೇರಿದ ಜಾಗದಲ್ಲಿ ನರ್ಸರಿ ನಿರ್ಮಾಣಕ್ಕೆ ಗುಡ್ಡದ ಮಣ್ಣನ್ನು ಸಮತಟ್ಟು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.
ಸಂಬಂಧಿಸಿದ ಯಾವುದೇ ಇಲಾಖೆಗಳ ಅನುಮತಿಯಿಲ್ಲದೆ ಸ್ಥಳೀಯ ಆಡಳಿತದ ಗಮನಕ್ಕೂ ತಾರದೆ ಹಲವು ಲೋಡ್ ಗಳಷ್ಟು ಬಂಡೆ ಹಾಗೂ ಕಲ್ಲುಮಣ್ಣು ಸಾಗಾಟ ನಡೆದಿದೆ.
ಮಣ್ಣು ಸಾಗಾಟಕ್ಕೆ ಸಂಬಂಧಿಸಿದಂತೆ ಜಾಗದ ಮಾಲೀಕ ಮಹಿಳೆಗೆ ಯಾವುದೇ ಸೂಕ್ತ ಮಾಹಿತಿ ಇಲ್ಲದಿರುವುದು ಕಂಡುಬಂದಿದೆ. ಸ್ಥಳಕ್ಕೆ ಗ್ರಾಪಂ ಪಿಡಿಒ ಸಂತೋಷ್, ಕಾರ್ಯದರ್ಶಿ ಅವಿನಾಶ್ ಭೇಟಿ ನೀಡಿ ಪರಿಶೀಲಿಸಿ ಜಾಗದ ಮಾಲೀಕರನ್ನು ಪ್ರಶ್ನಿಸಿದ್ದಾರೆ. ನರ್ಸರಿ ನಿರ್ಮಾಣಕ್ಕೆಂದು ಜಾಗ ಸಮತಟ್ಟು ಮಾಡಿಕೊಡಲು ವ್ಯಕ್ತಿಯೊಬ್ಬರಿಗೆ ತಿಳಿಸಲಾಗಿತ್ತು. ಆದರೆ ಮಣ್ಣು ಸಾಗಾಟಕ್ಕೆ ಅಗತ್ಯ ಅನುಮತಿ ಪಡೆದುಕೊಳ್ಳಬೇಕೆಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಪಿಡಿಒ ತಹಸೀಲ್ದಾರ್ ಗೆ ಪತ್ರ ಬರೆಯಲು ಕ್ರಮ ಕೈಗೊಂಡಿದ್ದಾರೆ. ಇಲ್ಲಿಂದ ಮಣ್ಣು ಸಾಗಿಸುತ್ತಿರುವ ವ್ಯಕ್ತಿ ಈ ಹಿಂದೆ ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ನಡೆದಿದ್ದ ಮಣ್ಣು ಸಾಗಾಟ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎನ್ನಲಾಗಿದೆ. ಇದೀಗ ಮತ್ತೆ ಈ ವ್ಯಕ್ತಿ ಮಾಲೀಕರ ಹಾದಿತಪ್ಪಿಸಿ ಕಳೆದ ಕೆಲವು ದಿನಗಳಿಂದ ಈಗಾಗಲೇ ನಿರಂತರವಾಗಿ ಹಲವು ಲೋಡ್ ಗಳಷ್ಟು ಮಣ್ಣು ಸಾಗಿಸಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
Back to top button
error: Content is protected !!