ಧಾರ್ಮಿಕ

ಕೊಡಗು ಜಿಲ್ಲೆಗೆ ಆಗಮಿಸಿದ ಅಖಿಲ ಭಾರತ ಸಾಧು ಸಂತರ ತಂಡ

ಕುಶಾಲನಗರ, ಅ 19: ನದಿ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ಸಂಬಂಧ ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಅಖಿಲ ಭಾರತ ಸಾಧು ಸಂತರ ತಂಡ ಶನಿವಾರ ಜಿಲ್ಲೆಗೆ ಆಗಮಿಸಿದೆ.
ಮೈಸೂರು ಮೂಲಕ ಕುಶಾಲನಗರ ಮಾರ್ಗವಾಗಿ ತಲಕಾವೇರಿಗೆ ತೆರಳಿದ ತಂಡವನ್ನು ಕುಶಾಲನಗರ ಗಡಿಭಾಗದ ಕೊಪ್ಪದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ತಲಕಾವೇರಿಯಿಂದ ಪೂಂಪ್ ಹಾರ್ ತನಕ ಸಾಗಲಿರುವ ಯಾತ್ರೆಗೆ ಇಂದು (20ರಂದು) ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ ದೊರೆಯಲಿದೆ.
ಬೆಳಗ್ಗೆ 9 ಗಂಟೆಗೆ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಪವಿತ್ರ ತೀರ್ಥವನ್ನು ಕಳಸಗಳಲ್ಲಿ ಸಂಗ್ರಹಿಸಿ ಒಯ್ಯಲಾಗುವುದು. ನಂತರ ಯಾತ್ರೆಗೆ ಅರಮೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು 14ನೇ ವರ್ಷದ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಅಖಿಲ ಭಾರತ ಸನ್ಯಾಸಿಗಳ ಸಂಘದ ಸಂಸ್ಥಾಪಕರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸಾಧು-ಸಂತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಾವೇರಿ ಮಾತೆಯ ರಥದೊಂದಿಗೆ ನವೆಂಬರ್ 13ರ ತನಕ ಕಾವೇರಿ ನದಿ ತಟದ ಪ್ರದೇಶಗಳಲ್ಲಿ ತಂಡ ಸಂಚರಿಸಲಿದೆ. ತಮಿಳುನಾಡಿನ ಕಾವೇರಿ ಹಾಗೂ ಬಂಗಾಳ ಕೊಲ್ಲಿ ಸಮುದ್ರಸಂಗಮದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪವಿತ್ರ ತೀರ್ಥವನ್ನು ವಿಸರ್ಜನೆ ಮಾಡುವುದರೊಂದಿಗೆ ಯಾತ್ರೆ ಅಂತ್ಯಗೊಳ್ಳಲಿದೆ.

ಯಾತ್ರಾ ಅವಧಿಯಲ್ಲಿ ನದಿಯ ತಟಗಳಲ್ಲಿ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು ನಡೆಯುವುದರೊಂದಿಗೆ ನದಿ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ರಮಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಯಾತ್ರಾ ತಂಡ ಜಿಲ್ಲೆಯಲ್ಲಿ ಭಾಗಮಂಡಲ ಕುಶಾಲನಗರ ಮೂಲಕ ಕಣಿವೆ ಮಾರ್ಗವಾಗಿ ಸಂಚರಿಸಲಿದ್ದು ಇಂದು ಭಾಗಮಂಡಲದ ಸಂಗಮದಲ್ಲಿ ವಿಶೇಷ ಆರತಿ ಕಾರ್ಯಕ್ರಮ ನಡೆಯಲಿದೆ.
ಕುಶಾಲನಗರದಲ್ಲಿ ಸಂಜೆ ನಾಲ್ಕು ಗಂಟೆಗೆ ಕಾವೇರಿ ಆರತಿ ಕ್ಷೇತ್ರದಲ್ಲಿ ಯಾತ್ರಾ ತಂಡ 165ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯುವುದು.
ಮರುದಿನ ಕಣಿವೆಯಲ್ಲಿ ಶ್ರೀ ರಾಮಲಿಂಗೇಶ್ವರ ದೇವಾಲಯ ಬಳಿ ಮಹಾ ಆರತಿ ಕಾರ್ಯಕ್ರಮ ಜರುಗಲಿದೆ. ತದನಂತರ ಕೊಣನೂರು ಮಾರ್ಗವಾಗಿ ರಾಮನಾಥಪುರದತ್ತ ಕಾವೇರಿ ನದಿ ಜಾಗೃತಿ ಯಾತ್ರೆ ತಂಡ ಸಾಗಲಿದೆ.
ಕುಶಾಲನಗರಕ್ಕೆ ಯಾತ್ರಾ ತಂಡ ಆಗಮಿಸಿದ ವೇಳೆ ಸ್ಥಳೀಯ ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್ ಮತ್ತಿತರರು ಸಾಧು ಸಂತರಿಗೆ ಪವಿತ್ರ ಕಾವೇರಿ ತೀರ್ಥ ನೀಡುವುದರೊಂದಿಗೆ ಬರಮಾಡಿಕೊಂಡರು.
ಈ ಸಂದರ್ಭ ಸಾಧು ಸಂತರ ತಂಡದ ಸದಸ್ಯರು ಗಡಿಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!