ಕುಶಾಲನಗರ, ಅ 18 : ಕಾವೇರಿ ತುಲಾಸಂಕ್ರಮಣದ ಅಂಗವಾಗಿ ಕಾವೇರಿ ನೀರಾವರಿ ನಿಗಮದಿಂದ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಕಾವೇರಿ ಮಾತೆಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ತಲಕಾವೇರಿಯ ಕುಂಡಿಕೆಯಿಂದ ತಂದ ಗಂಗಾ ಜಲದಿಂದ ಹಾರಂಗಿ ಜಲಾಶಯದ ಮುಂಬದಿಯಲ್ಲಿರುವ ಕಾವೇರಿ ಪ್ರತಿಮೆಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ಅರಕಲಗೂಡು ಶಾಸಕ ಎ.ಮಂಜು ಪಾಲ್ಗೊಂಡಿದ್ದರು.
ನಾಡಿನಾದ್ಯಂತ ಈ ಬಾರಿ ಅತ್ಯುತ್ತಮ ಮಳೆಯಾಗಿರುವುದರಿಂದ ರೈತರ ಬೆಳೆಯ ಉತ್ತಮ ಫಸಲು ಬಂದು ನಾಡು ಸಮೃದ್ಧವಾಗಲೆಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿದರು.
ನಂತರ ಜಲಾಶಯಕ್ಕೆ ತೆರಳಿ ಬಾಗೀನ ಸಮರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಮಂತರ ಗೌಡ, ಪ್ರತಿ ವರ್ಷದ ಸಂಪ್ರದಾಯದಂತೆ ಕಾವೇರಿ ತಾಯಿಗೆ ತಲಕಾವೇರಿಯ ಪವಿತ್ರ ತೀರ್ಥವನ್ನು ತಂದು ಅಭಿಷೇಕ ಮಾಡಿ ಪೂಜಿಸಿ ಪ್ರಾರ್ಥಿಸಲಾಗುತ್ತಿದೆ.
ರೈತಾಪಿ ಸಂಕುಲಕ್ಕೆ ಕೃಷಿಗೆ ನೀರು ಹರಿಸುವ ಜಲಾಶಯಕ್ಕೆ ರೈತರನ್ನೆಲ್ಲಾ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಅವರೊಟ್ಟಿಗೆ ಊಟ ಮಾಡುವ ಉದ್ದೇಶದಿಂದ ಪೂಜೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳಿಗೆ ಕೃಷಿಗೆ ನೀರೊದಗಿಸುವ ಹಾರಂಗಿಗೆ ಎಲ್ಲರೂ ಕೃತಜ್ಞರಾಗಬೇಕಿದೆ ಎಂದು ಶಾಸಕರು ಹೇಳಿದರು.
ಈಗಲೂ ಮಳೆಯಾಗುತ್ತಿರುವ ಕಾರಣ
ಹೂಳೆತ್ತುವ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಈಗಾಗಲೆ ಕೆಲವೆಡೆ ಗೇಬಿಯನ್ ವಾಲ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಎಲ್ಲರೂ ಕೂಡ ಹಾರಂಗಿ, ಕಾವೇರಿ ಸೇರಿದಂತೆ ಜಲಮೂಲಗಳ ರಕ್ಷಣೆಗೆ ಒತ್ತು ನೀಡುವಂತೆ ಅವರು ಕರೆ ನೀಡಿದರು.
ಈ ಸಂದರ್ಭ ವಿಧಾನ ಪರಿಷತ್ತು ಸದಸ್ಯ ಸುಜಾಕುಶಾಲಪ್ಪ, ಮಾಜಿ ಎಂಎಲ್ ಸಿ ವೀಣಾ ಅಚ್ಚಯ್ಯ, ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಪ್ರಮುಖರಾದ ಮಂಜುನಾಥ ಗುಂಡೂರಾವ್, ನಟೇಶ್ ಗೌಡ, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಕುಶಾಲನಗರ ಪುರಸಭೆ ಸದಸ್ಯ ಶಿವಶಂಕರ್, ದಿನೇಶ್, ಕುಡಾ ಸದಸ್ಯ ಕಿರಣ್, ಕೂಡಿಗೆ ಗ್ರಾಪಂ ಸದಸ್ಯ ಟಿ.ಪಿ.ಹಮೀದ್, ಅನಂತ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಮೊದಲಾದವರಿದ್ದರು.
ಇದೇ ಸಂದರ್ಭ ನೀರು ಬಳಕೆದಾರರ ಸಂಘಗಳ ಪದಾಧಿಕಾರಿಗಳಾದ ಕಾವೇರಿ ನೀರು ಬಳಕೆದಾರರ ಮಹಾಮಂಡಳದ ಪ್ರಮುಖರು, ಸಲಹಾ ಸಮಿತಿ ಸದಸ್ಯರಿಗೆ ಕಾವೇರಿ ತಾಯಿಯ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು.
ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಕೆ.ಕೆ. ರಘುಪತಿ, ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ, ತೋಟಗಾರಿಕಾ ಇಲಾಖೆಯ ವರದರಾಜ್, ಮೀನುಗಾರಿಕೆ ಇಲಾಖೆಯ ಮಿಲನಾ ಭರತ್, ಸಚಿನ್ ಸೇರಿದಂತೆ ನೀರಾವತಿ ನಿಗಮದ ಅಭಿಯಂತರರು, ಸಿಬ್ಬಂದಿ ವರ್ಗದವರು ಇದ್ದರು.
Back to top button
error: Content is protected !!