ಪ್ರತಿಭಟನೆ

ಕುಶಾಲನಗರ ಪಪಂ ಚುನಾವಣೆ ರದ್ದತಿಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಕುಶಾಲನಗರ, ಸೆ 20 : ಕುಶಾಲನಗರ ಪಟ್ಟಣ ಪಂಚಾಯತಿಗೆ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆ.25 ರಂದು ಚುನಾವಣೆ ಘೋಷಣೆಯಾಗಿದ್ದು, ಇಬ್ಬರು ನಾಮನಿರ್ದೇಶಿತ ಸದಸ್ಯರಿಗೆ ನೀಡಲಾಗಿರುವ ಮತದಾನದ ಹಕ್ಕು ರದ್ದುಪಡಿಸಿ ನ್ಯಾಯ ಸಮ್ಮತ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಎಂ.ಚರಣ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪುರಸಭಾ ಸದಸ್ಯರು ತಹಸೀಲ್ದಾರ್ ಕಚೇರಿ ಮುಂಭಾಗ ಕೆಲಕಾಲ ಧರಣಿ ನಡೆಸಿ ಘೋಷಣೆ ಕೂಗಿದರು.
ಈ‌ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ
ಬಿಜೆಪಿ ಮುಖಂಡ ಕೆ.ಜಿ.ಮನು,
ಕರ್ನಾಟಕ ಪೌರಾಡಳಿತ ಕಾಯ್ದೆ ಅನ್ವಯ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಒಟ್ಟು 07 ಜನರನ್ನು ನಾಮನಿರ್ದೇಶನ ಮಾಡಿರುವುದು ಕಾನೂನು ಬಾಹಿರ ಹಾಗೂ ಅದರಲ್ಲಿ ಉದ್ದೇಶ ಪೂರ್ವಕವಾಗಿ 2 ಸದಸ್ಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮತದಾನ ಮಾಡಲು ಹಕ್ಕು ನೀಡಲಾಗಿದೆ. ಕರ್ನಾಟಕ ಪೌರಾಡಳಿತ ಕಾಯ್ದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಹಕ್ಕು ಇಲ್ಲ.
ಆದರೆ ಚುನಾವಣಾಧಿಕಾರಿ ಕಾಂಗ್ರೆಸ್ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಾಮನಿರ್ದೇಶಿತ ಸದಸ್ಯರಿಗೆ ನೀಡಿರುವ ಮತದಾನ ಹಕ್ಕನ್ನು ರದ್ದುಪಡಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಾಧ್ಯಕ್ಷ ಚರಣ್ ಮಾತನಾಡಿ, ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಮುಳ್ಳುಸೋಗೆ ಪಂಚಾಯತಿಯನ್ನು ಸೇರ್ಪಡೆ ಮಾಡಿ ಪುರಸಭೆಯಾಗಿ ಮೇಲ್ದರ್ಜೆಗೆ ಸೇರಿಸಿ ಒಂದೂವರೆ ವರ್ಷಗಳೆ ಕಳೆದಿವೆ.ಆದರೆ ಈಗ ಈ ಹಿಂದಿನ ಪಟ್ಟಣ ಪಂಚಾಯತಿಗೆ 2ನೇ ಅವದಿಗೆ ಚುನಾವಣೆ ಘೋಷಣೆ ಮಾಡಲಾಗಿದೆ.ಜೊತೆಗೆ ಪುರಸಭೆಗೆ ನಾಮನಿರ್ದೇಶಿತ 7 ಸದಸ್ಯರ ಪೈಕಿ ಇಬ್ಬರಿಗೆ ಪ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಮತದಾನ ಹಕ್ಕು ನೀಡಿರುವುದು ಕಾನೂನು ಎಂದು ದೂರಿದರು.
ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಕಿರಣ್ ಗೌರಯ್ಯ ಪ್ರತಿಕ್ರಿಯೆ ನೀಡಿ,ಕುಶಾಲನಗರ ಪುರಸಭೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಗ್ರಾಮ ಪ್ರತಿನಿಧಿಗಳಾಗಿ ಜಗದೀಶ್ ಮತ್ತು ಪದ್ಮಾವತಿ ಅವರನ್ನು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಮುಂದಿನ ಸೆ.25 ರಂದು ನಡೆಯುವ ಪ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ನೋಟಿಸ್ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ನ್ಯಾಯಾಲಯದ ಆದೇಶದನ್ವಯ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ.ಆದರೆ ಬಿಜೆಪಿ ಪುರಸಭಾ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿಲ್ಲ.ಸರ್ಕಾರದ ಆದೇಶದಂತೆ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಡಿ.ಕೆ.ತಿಮ್ಮಪ್ಪ, ಅಮೃತ್ ರಾಜ್, ಜೈವರ್ಧನ್, ಜಗದೀಶ್ ಸೇರಿದಂತೆ ನಗರ ಬಿಜೆಪಿ, ಸೋಮವಾರಪೇಟೆ ಮಂಡಲ‌ ಬಿಜೆಪಿ,‌ ಕುಶಾಲನಗರ ಯುವಮೋರ್ಚಾ ಮುಖಂಡರಾದ ಮಧುಸೂದನ್, ಗೌತಮ್, ರಾಮನಾಥನ್, ಸಚಿನ್ ಉಮಾಶಂಕರ್, ಎಂ.ಡಿ.ಕೃಷ್ಣಪ್ಪ,ಮಂಜುನಾಥ್,ಎಂ.ವಿ.ರಾಜೇಶ್,ಎಚ್.ಟಿ.ವಸಂತ,ಪ್ರವೀಣ್,ಆಸಿಫ್,ವೈಶಾಖ್, ಪ್ರಶಾಂತ್, ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು. ವೃತ್ತ ನೀರಿಕ್ಷಕ ಪ್ರಕಾಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!