ಕಾರ್ಯಕ್ರಮ

ವಚನಗಾರ್ತಿ ಅಕ್ಕಮಹಾದೇವಿ ಚಿಂತನಾ ಗೋಷ್ಠಿ

ಕುಶಾಲನಗರ, ಸೆ 04:  ಆಧುನಿಕ ಜಗತ್ತಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಗಳು ಮುಂದುವರೆಯುತ್ತಿರುವ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆಯಲ್ಲಾ ಎಂದು ವಿಷಾದಿಸಿದ ಕುಶಾಲನಗರದ ನಿವೃತ್ತ ಪ್ರಾಂಶುಪಾಲೆ ಡಾ.ಬಿ.ಆರ್.ಶಾಂತಲಕ್ಷ್ಮಿ, ಹೆಣ್ಣು ಮಕ್ಕಳು ಹಾಗು ಮಹಿಳೆಯರ ಮೇಲೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವ ಇಂತಹ ಮಹಿಳಾ ದೌರ್ಜನ್ಯವನ್ನು ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿಯೇ ಶ್ರೇಷ್ಟ ನಿದರ್ಶನ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರದ ನಾಗೇಗೌಡ ಬಡಾವಣೆಯ ಕಾವೇರಿ ಸ್ವ ಸಹಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ” ವಚನಗಾರ್ತಿ ಅಕ್ಕಮಹಾದೇವಿ” ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಮಹಾದೇವಿ ಬಾಲ್ಯದಿಂದಲೇ ಶಿವಗುಣಗಳನ್ನು ಮೈಗೂಡಿಸಿಕೊಂಡು ಚನ್ನಮಲ್ಲಿಕಾರ್ಜುನನ್ನು ದೈವವಾಗಿಸಿ ಮಾನಸ ಪೂಜೆಯಲ್ಲಿ ನಿರತರಾಗಿದ್ದಾಗ ಕೌಶಿಕ ಮಹಾರಾಜನು ಅಕ್ಕನ ಸೌಂದರ್ಯಕ್ಕೆ ಮನಸೋತು ಅಕ್ಕನ ಮೈಮೇಲಿನ ವಸ್ತ್ರಗಳಿಗೆ ಕೈ ಹಾಕಿದ ಕಾರಣಕ್ಕೆ ವೈರಾಗ್ಯಮತಿಯಾದ ಅಕ್ಕಾ ನಿರ್ವಸ್ತ್ರಳಾಗಿ ಮನೆ ತೊರೆಯುತ್ತಾಳೆ.
ಬಳಿಕ ಅಕ್ಕನ ಮನದೈವ ಚನ್ನಮಲ್ಲಿಕಾರ್ಜುನನ ಅನುಗ್ರಹದಿಂದ ಪವಾಡವೆಂಬಂತೆ ಅಕ್ಕನ ತಲೆಯಕೂದಲು ದೇಹವನ್ನು ಆವರಿಸುತ್ತವೆ.
ಕೊನೆಗೆ ಅಕ್ಕಾ ಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ ಬಸವೇಶ್ವರರು ಅಕ್ಕಾ ಎಂದು ಕರೆದರೆ, ಅಲ್ಲಮಪ್ರಭುಗಳು ವೀರವೈರಾಗಿಣಿ ಎಂದು ಕರೆಯುತ್ತಾರೆ. ಅಂತಹಾ ಅಕ್ಕಾಮಹಾದೇವಿ ರಚಿಸಿರುವ 400 ಕ್ಕೂ ಹೆಚ್ಚಿನ ವಚನಗಳು ಮನುಕುಲದ ದೀವಿಗೆಗಳಾಗಿವೆ ಎಂದು ಡಾ.ಶಾಂತಲಕ್ಷ್ಮಿ ವಚನಗಳನ್ನು ವಿಶ್ಲೇಷಿಸಿದರು.
ಅತಿಥಿಯಾಗಿದ್ದ ನಿವೃತ್ತ ಶಿಕ್ಷಕಿ ಪೊನ್ನಚ್ಚನ ಲತಾ ಅಪ್ಪಣ್ಣ ಹಾಗೂ ಮುಕ್ಕಾಟಿ ಧರಣಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಶರಣರು ಸಾರಿ ಹೋಗಿರುವ ವಚನಗಳ ಸಂದೇಶಗಳನ್ನು ಶಾಲಾ ಮಕ್ಕಳಿಗೆ ವಿವರಿಸಿ ಕಲಿಸಿದಲ್ಲಿ ಮಾತ್ರ ಸಂಸ್ಕಾರವಂತ ಸಮಾಜ ಹಾಗೂ ಶರಣರು ಬಯಸಿದ ಆದರ್ಶ ಸಮಾಜ ಕಟ್ಟಲು ಸಾಧ್ಯವಾಗುತ್ತದೆ.
ಮಕ್ಕಳಿಗೆ ಎಲ್ಲಾ ತಾಯಂದಿರು ವಚನಗಳನ್ನು ಕಲಿಸಲು ವಿನಂತಿಸಿದರು.
ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕದಳಿ ವೇದಿಕೆಯ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಕೋಶಾಧಿಕಾರಿ ಜಿ.ಎಸ್.ವೇದಾವತಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಕಾವೇರಿ ಸ್ವಸಹಾಯ ಸಂಘದ ಪ್ರಮುಖರಾದ
ನಿವೃತ್ತ ಶಿಕ್ಷಕಿ ಮೊಳ್ಳೇರಾ ಪಾರ್ವತಿ, ರೇಖಾ ನಟರಾಜು, ನಂದಿನಿ, ಕಾಮಾಕ್ಷಿ, ವೇದಾವತಿ, ಕಾಂತಾ, ದೇವಕಿ, ಪುಟ್ಟಲಿಂಗಮ್ಮ, ಶಿವಮ್ಮ, ಜಯಲಕ್ಷ್ಮಿ, ಸರೋಜಾ ಆರಾಧ್ಯ, ಮೊದಲಾದವರಿದ್ದರು.
ಸರೋಜಾ ಆರಾಧ್ಯ ಸ್ವಾಗತಿಸಿದರು.
ಮಮತಾ ರವೀಶ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!