ಕುಶಾಲನಗರ, ಸೆ 04: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹೋಬಳಿ ಸಂಘದ ಬೆಳ್ಳಿಮಹೋತ್ಸವ ಸಂಭ್ರಮದ ಅಂಗವಾಗಿ ಪತ್ರಿಕಾ ವಿತರಕರ ದಿನದ ಹಿನ್ನಲೆಯಲ್ಲಿ ಕುಶಾಲನಗರದ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊಪ್ಪ ಗಿರಗೂರಿನ ಡ್ಯೂ ಡ್ರಾಪ್ಸ್ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಳೆದೆರೆಡು ದಶಕಗಳಿಗೆ ಹೋಲಿಸಿದರೆ ಪತ್ರಿಕೆಗಳ ವಿತರಣೆ ಸಂಖ್ಯೆ ಹೆಚ್ಚಾಗಿದ್ದರೂ ಕೂಡ ಓದುಗರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ. ಕೊರೋನ ಸಂದರ್ಭ ಹಾಗೂ ನಂತರ ದಿನಗಳಲ್ಲಿ ಕಾಸ್ಟ್ ಕಟ್ಟಿಂಗ್ ಹೆಸರಿನಲ್ಲಿ ದಿನಪತ್ರಿಕೆಗಳು ಆದ್ಯತಾ ಪಟ್ಟಿಯಿಂದ ಹೊರಗುಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು, ವಿಶೇಷ ವರದಿಗಳು ಬಿತ್ತರಗೊಳ್ಳುತ್ತಿರುವ ಕಾರಣದಿಂದಲೂ ಪತ್ರಿಕೆಗಳ ಮೇಲಿನ ಆಸಕ್ತಿ ಕ್ಷೀಣಿಸುತ್ತಿದೆ ಎಂದರು. ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಸರಕಾರ ನೈಜ ಕಾಳಜಿ ವಹಿಸಬೇಕಿದೆ. ಘೋಷಿಸಿದ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಿದೆ. ಮನೆಮನೆಗಳಿಗೆ ಪತ್ರಿಕೆ ತಲುಪದಿದ್ದಲ್ಲಿ ಓದುಗರ ದೂರದಿಂದ ಖರೀದಿಸಲು ಮುಂದಾಗುವುದಿಲ್ಲ. ಮುಂದಿನ ಪೀಳಿಗೆಯಲ್ಲಿ ನಿರಾಸಕ್ತಿ ಕಾರಣ ಪತ್ರಿಕಾ ವಿತರಕರ ಕೊರತೆ ಕೂಡ ಎದುರಾಗುವ ಸಾಧ್ಯತೆಯಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಿಕಾ ವಿತರಕರದ್ದು ನಿಸ್ವಾರ್ಥ ಸೇವೆ. ಅತ್ಯಂತ ಜವಾಬ್ದಾರಿಯ, ಸಮಯ ಪ್ರಜ್ಞೆಯಿಂದ, ಬಿಸಿಲು,ಮಳೆ, ಚಳಿಯಲ್ಲಿ ಶ್ರಮದ ಕಾರ್ಯ ನಿರ್ವಹಿಸುವ ಈ ವರ್ಗದವರನ್ನು ಅತ್ಯವಶ್ಯಕವಾಗಿ ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಪತ್ರಿಕಾ ವಿತರಣೆ ಕಾರ್ಯ ಅತ್ಯಂತ ಸಾಹಸಮಯ ಕಾರ್ಯವಾಗಿದೆ. ಬೀದಿನಾಯಿಗಳ ಹಾವಳಿ ನಡುವೆ ಪತ್ರಿಕೆ ವಿತರಣೆ ಮಾಡಿ, ಶುಲ್ಕ ವಸೂಲಿ ಮಾಡುವುದು ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎಂದು ವಿವರಿಸಿದರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಿಕಾ ವಿತರಕರ ಶ್ರಮವನ್ನು ಎಲ್ಲರೂ ಮನಗಾಣಬೇಕಿದೆ. ಸ್ಥಳೀಯ ಸಂಘಸಂಸ್ಥೆಗಳು, ಆಡಳಿತ ವ್ಯವಸ್ಥೆಯಿಂದ ವಿತರಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದರು.
ಇದೇ ಸಂದರ್ಭ ಪತ್ರಿಕಾ ವಿತರಣೆ ಕಾರ್ಯ ನಿರ್ವಹಿಸುವ ಕುಶಾಲನಗರದ ಚಂದ್ರಣ್ಣ, ವಿ.ಪಿ.ಸುಖೇಶ್, ಕೃಷ್ಣ ಹಾಗೂ ಸತ್ಯ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ಮುಖಂಡ ಹೇರೂರು ಚಂದ್ರಶೇಖರ್, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಹೆಬ್ಬಾಲೆ ರಘು ಮಾತನಾಡಿದರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ರೈ, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಖಜಾಂಚಿ ಕುಡೆಕಲ್ ಗಣೇಶ್, ಕಾರ್ಯದರ್ಶಿ ನಾಗರಾಜ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಟಿ.ಆರ್.ಪ್ರಭುದೇವ್, ಸಹ ಸಂಚಾಲಕರಾದ ಜಯಪ್ರಕಾಶ್, ಮಹಮ್ಮದ್ ಮುಸ್ತಾಫ, ಕೊಡಗು ಪ್ರೆಸ್ ಕ್ಲಬ್ ಸಂಘಟನಾ ಕಾರ್ಯದರ್ಶಿ ಶಿವರಾಜ್, ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘದ ನಿರ್ದೇಶಕರಾದ ಇಸ್ಮಾಯಿಲ್ ಕಂಡಕೆರೆ, ಸಂಶುದ್ದಿನ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಇದ್ದರು.
Back to top button
error: Content is protected !!