ಮನವಿ
ದುಬಾರೆ ರಾಫ್ಟ್ ತಂಡಕ್ಕೆ ಆಕ್ಸಿಜನ್, ಸ್ವಿಮ್ ಸೂಟ್ ಒದಗಿಸಲು ಮನವಿ.
ಕುಶಾಲನಗರ ಜು 29: ಕೊಡಗು-ಮೈಸೂರು ಗಡಿಯಲ್ಲಿರುವ ಕಾವೇರಿ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದ ಕೊಡಗು ಜಿಲ್ಲೆಯ ಸರಕಾರಿ ನೌಕರ ಕೆ.ಎಸ್ ಅರುಣ್ ಕುಮಾರ್ ಮೃತದೇಹ ಸೋಮವಾರ ಪತ್ತೆಯಾಗಿದೆ.
ಬುಧವಾರ ನದಿಗೆ ಹಾರಿದ್ದ ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ಕಛೇರಿಯ ಎಫ್ ಡಿ. ಎ.ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಕುಮಾರ್ ಮೃತದೇಹ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಕಾರಣ ಪತ್ತೆಯಾಗಿರಲಿಲ್ಲ.
ಪೊಲೀಸ್ ಇಲಾಖೆ, ಎನ್.ಡಿ.ಆರ್.ಎಫ್, ದುಬಾರೆ ರಿವರ್ ರಾಫ್ಟ್, ಅಗ್ನಿಶಾಮಕ, ತುರ್ತು ಸೇವೆಗಳ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿದ್ದವು.
ಕಳೆದ ಆರು ದಿನಗಳಿಂದ ನಿರಂತರ ಕಾವೇರಿ ನದಿಯಲ್ಲಿ ಮೃತ ದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ನದಿಗೆ ಹಾರಿದ್ದ ಸ್ಥಳದಿಂದ ಐದಾರು ಕಿಮೀ ದೂರದಲ್ಲಿ ಮುಳ್ಳುಸೋಗೆ- ಕೂಡ್ಲೂರು ಗ್ರಾಮ ನಡುವೆ ಕಾವೇರಿ ನದಿ ದಂಡೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಕುಶಾಲನಗರ ಸಮುದಾಯದ ಅರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿ ವೈ. ಎಸ್. ಪಿ. ಗಂಗಾಧರಪ್ಪ, ಕುಶಾಲನಗರ ನಿರೀಕ್ಷಕ ಪ್ರಕಾಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ಠಾಣಾಧಿಕಾರಿಗಳಾದ ಚಂದ್ರಶೇಖರ್, ಮೋಹನ್ ರಾಜ್, ಸೇರಿದಂತೆ ಶೋಧ ಕಾರ್ಯದಲ್ಲಿ ತೊಡಗಿದ್ದ ವಿವಿಧ ತಂಡದವರು ಹಾಜರಿದ್ದರು.
ಮೃತದೇಹ ಶೋಧ ಕಾರ್ಯದಲ್ಲಿ ತೊಡಗಿದ್ದ ದುಬಾರೆ ರಿವರ್ ರಾಫ್ಟಿಂಗ್ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮನವಿ ಮಾಡಿದ್ದಾರೆ. ಯಾವುದೇ ಫಲ ನಿರೀಕ್ಷಿಸದೆ ಹಲವು ವರ್ಷಗಳಿಂದ ನದಿಯಲ್ಲಿ ಕಾರ್ಯಾಚರಣೆ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಫ್ಟ್ ತಂಡಕ್ಕೆ ಸ್ವಿಮ್ ಸೂಟ್, ಮುಳುಗು ತಜ್ಞರಿಗೆ ಸಮರ್ಪಕ ಆಕ್ಸಿಜನ್ ಸೌಲಭ್ಯ ಒದಗಿಸಲು ರಾಜೇಶ್, ಚೇತನ್, ಲಿಖಿತ್ ಮತ್ತಿತರರು ಮನವಿ ಮಾಡಿದ್ದಾರೆ.