(ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ)
ಪಿರಿಯಾಪಟ್ಟಣ, ಜು 18: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು, ಸಣ್ಣಪುಟ್ಟ ರಸ್ತೆಬದಿ ವ್ಯಾಪಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.
ಈ ಬಾರಿ ತಾಲೂಕಿನಲ್ಲಿ ಮಾನ್ಸೂನ್ ಮಳೆ ಆರಂಭವಾದ ನಂತರ ಸತತವಾಗಿ ಮಳೆ ಬೀಳಲು ಪ್ರಾರಂಭವಾಗಿ ರೈತರ ಮಂದಹಾಸವನ್ನು ಹಿಮ್ಮಡಿಗೊಳಿಸಿತ್ತು, ತಂಬಾಕು, ಮುಸುಕಿನ ಜೋಳ, ಶುಂಠಿ, ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ಆದರೆ ಜುಲೈ ತಿಂಗಳ 7 ರಂದು ಪುನರ್ವಸು ಮಳೆ ಆರಂಭಗೊಂಡ ದಿನದಿಂದ ಇಂದಿನ ಅಂದರೆ ಜುಲೈ 18 ರ ವರೆಗೂ ಸತತ 10 ದಿನಗಳು ಸುರಿದ ಮಳೆಗೆ ಹೊಲಗದ್ದೆಗಳಲ್ಲಿ, ರಸ್ತೆ ಚರಂಡಿಗಳಲ್ಲಿ, ತೋಟತುಡಿಕೆಗಳಲ್ಲಿ ನೀರು ತುಂಬಿ ಬಿತ್ತಿದ ಬೆಳೆ ಕೊಳೆಯಲು ಆರಂಭವಾಗಿದೆ, ಇಷ್ಟರಲ್ಲೇ ತಂಬಾಕು ಎಲೆಗಳನ್ನು ಮುರಿಯುವ ಹಂತ ತಲುಪಿ ಇನ್ನೇನು ಹದ ಮಾಡುವ ಕೆಲಸ ಆರಂಭವಾಗಬೇಕು ಎಂಬಷ್ಟರಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರು ಬಿತ್ತಿದ ಬೆಳೆಯನ್ನು ಬೆಳೆ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯದಿಂದ ಕಕ್ಕಾಬಿಕ್ಕಿಯಾಗಿದ್ದಾರೆ. ಇನ್ನು ಅಲ್ಲಲ್ಲಿ ತೋಟತುಡಿಕೆಗಳು ಜಲಾವೃತವಾಗಿದ್ದು, ಹಳ್ಳದಲ್ಲಿರುವ
ಮನೆಗಳಿಗೆ ನೀರು ನುಗ್ಗಿ ಜನತೆ ಜಾಗರಣೆ ಮಾಡುತ್ತಿದ್ದರೆ , ಅಲ್ಲಲ್ಲಿ ಹಳೆಯ ಮನೆಗಳ ಗೋಡೆಗಳು ಶಿಥಿಲಗೊಂಡು ಕುಸಿಯಲು ಆರಂಭಿಸಿವೆ, ಮತ್ತೊಂದೆಡೆ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಗಳು ಅಸ್ತವ್ಯಸ್ತಗೊಂಡು ಕೆಸರುಗದ್ದೆಯಾಗಿದ್ದು ಕ್ರಮ ಕೈಗೊಳ್ಳದ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಛೀಮಾರಿ ಹಾಕಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಮನೆಗಳಿಗೆ ಮಳೆ ನೀರಿನೊಂದಿಗೆ ಗಲೀಜು ಒಳನುಗ್ಗಿದ ಕಾರಣ ನಿವಾಸಿಗಳು ಪರದಾಡುವಂತಾಗಿ ರಸ್ತೆಗಳು, ಮನೆಗಳೆಲ್ಲಾ ಚರಂಡಿಗಳಾಗಿ ಪರಿವರ್ತನೆಯಾಗುತ್ತದೆ ಆದರೂ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದರೂ ಸ್ಥಳಕ್ಕೆ ಯಾರೂ ಕೂಡ ಆಗಮಿಸುತ್ತಿಲ್ಲ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇವಲ ಪೋನ್ ಕರೆಗಳಲ್ಲೇ ಮಾತನಾಡಿ ಸಬೂಬು ಹೇಳಿಕೊಂಡು ಜನರ ಕಣ್ಣೊರೆಸುವ ತಂತ್ರವನ್ನು ಮಾಡುತ್ತಿದ್ದಾರೆ. ಜನತೆಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವ ಮೂಲಕ ಜನರಿಗಾಗುವ ತೊಂದರೆಯನ್ನು ತಪ್ಪಿಸುವಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಮಾಡಿರುವುದಲ್ಲದೆ ಸಂಪೂರ್ಣ ವಿಫಲವಾಗಿದ್ದಾರೆ ಎಂಬುದು
ಸ್ಥಳೀಯರ ಆರೋಪ. ಅಲ್ಲಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದ್ದು, ನೀರು ನಿಲುಗಡೆಯಾಗಿ ದುರ್ವಾಸನೆ, ಸೊಳ್ಳೆಗಳ ಕಾಟ ಉಂಟಾಗಿದೆ. ಚರಂಡಿ ನೀರು ಹರಿಯಲು ಮುಖ್ಯ ಚರಂಡಿ ಇಲ್ಲ. ತಾಲೂಕಿನ ಬೆಟ್ಟದಪುರ ಸಮೀಪದ ಹರದೂರು ಗ್ರಾಮದ ಸೊಸೈಟಿ ಪಕ್ಕದಲ್ಲೇ ರಸ್ತೆಗಳು ಕೊಳೆತು ನಾರುತ್ತಿದೆ, ಗ್ರಾಮದಲ್ಲಿ ನಿರ್ಮಾಣವಾಗಬೇಕಾದ ದೊಡ್ಡಚರಂಡಿಯ ಮೂಲಕವೇ ಎಲ್ಲ ಚರಂಡಿಗಳ ಅನುದಾನಗಳು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೇಬು ಸೇರಿ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿ ಹೋಗಿದೆ. ಗ್ರಾಮದಲ್ಲಿ ನೀರು ಹರಿಯಬೇಕಾಗಿದ್ದರೂ ಈ ಮುಖ್ಯ ಸಂಪರ್ಕ ಚರಂಡಿ ನಿರ್ಮಾಣವಾಗದಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇನ್ನು ಪುರಸಭಾ ವ್ಯಾಪ್ತಿಯ ನಗರೋತ್ಥಾನ ಪಟ್ಟಿಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಸೇರಿದ್ದರೂ ಅಧಿಕಾರಿಗಳು ಕೈಗೆತ್ತಿಕೊಳ್ಳದೆ ಅಸಡ್ಡೆ ಮಾಡಿದ್ದಾರೆ. ಈ ರಸ್ತೆ, ಚರಂಡಿ ನಿರ್ಮಾಣವಾಗದ ಹೊರತು ರಸ್ತೆಯಲ್ಲಿ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ದುರ್ವಾಸನೆ ಜೊತೆಗೆ ಡೆಂಗ್ಯೂ ಮಲೇರಿಯಾ ದಂತಹ ಮಾರಕ ಕಾಯಿಲೆಗಳನ್ನು ಹೆಚ್ಚಿಸುತ್ತಿವೆ ಹಾಗಾಗಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭಾ ಅಧಿಕಾರಿಗಳು ಈ ಸಮಸ್ಯೆ ಪರಿಹಾರ ನೀಡದಿದ್ದರೆ ಜನತೆ ಮಾರಕ ರೋಗಿಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ
Back to top button
error: Content is protected !!