ಪಿರಿಯಾಪಟ್ಟಣ ಜು 12: ದೇಶದ ಅಭಿವೃದ್ಧಿಗೆ ಮಾರಕ ಹಾಗೂ ಅನಾಹುತಗಳಿಗೆ ಕಾರಣವಾಗಿರುವ ಜನಸಂಖ್ಯೆಯನ್ನು ಭವಿಷ್ಯದ ಹಿತ ದೃಷ್ಟಿಯಿಂದ ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಂ.ರಾಜೇಗೌಡ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಅಂತಾರಾಷ್ಟ್ರೀಯ ಜನಸಂಖ್ಯಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
ಭಾರತವು ಜಗತ್ತಿನ ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗಿದೆ. ಇದರಿಂದ ದೇಶದೊಳಗಿನ ಸಂಪನ್ಮೂಲಗಳ ಮೇಲೆ ಅತೀವ ಪರಿಣಾಮ ಬೀರುವುದಲ್ಲದೆ, ನೈಸರ್ಗಿಕ ಸಂಪನ್ಮೂಲಗಳ ಅವನತಿಗೂ ಕಾರಣವಾಗಿದೆ. ಕಳೆದ 2011 ರ ಜನಗಣತಿ ಪ್ರಕಾರ ವಿಶ್ವದಲ್ಲಿ 116 ಬಿಲಿಯನ್ ಜನಸಂಖ್ಯೆ ಇದ್ದರೆ, ಏಷ್ಯಾ ಖಂಡದಲ್ಲಿ ಶೇ.60, ಅದರಲ್ಲೂ ಭಾರತ ಮತ್ತು ಚೀನಾದಲ್ಲಿ ಶೇ.37 ರಷ್ಟು ಜನಸಂಖ್ಯೆ ಇತ್ತು. ಆದರೆ ಯೂರೋಪ್, ಅಮೆರಿಕಾ, ಆಸ್ಟ್ರೇಲಿಯಾದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದೆ. ಬಾಂಗ್ಲಾ ದೇಶದಲ್ಲಿ 1 ಚ.ಕಿ.ಮೀಗೆ 1300, ಭಾರತದಲ್ಲಿ 388, ಯು.ಕೆಯಲ್ಲಿ 260, ಸಿಂಗಾಪುರದಲ್ಲಿ 710. ನೆದರ್‌ಲ್ಯಾಂಡ್‌ನಲ್ಲಿ 406 ಜನಸಾಂದ್ರತೆ ಇದೆ. ಜಪಾನ್‌ನಲ್ಲಿ ಇತ್ತೀಚೆಗೆ ಮದುವೆಯಾಗುವವರ ಸಂಖ್ಯೆ ಇಳಿಮುಖವಾಗಿದೆ. ಭಾರತದಲ್ಲಿ ಈಗಲೂ ಗಂಡು ಮಕ್ಕಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದು ಲಿಂಗ ತಾರತಮ್ಯವನ್ನು ಹೆಚ್ಚಿಸುತ್ತಿದೆ ಎಂದರು.
ವಕೀಲ ಹಾಗೂ ರೋಟರಿ ಸಂಸ್ಥೆ ಹಿರಿಯ ಸದಸ್ಯ ಬಿ.ವಿ.ಜವರೇಗೌಡ ಮಾತನಾಡಿ,
ವಿಶ್ವದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ, ಕಾಯ್ದೆ, ಅರಿವಿನ ಮೂಲಕ ಕಾರ್ಯಕ್ರಮ ರೂಪಿಸಿದ್ದರೂ ಜನಸಂಖ್ಯೆ ನಿಯಂತ್ರಣ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರದಿಂದಾಗಿ ಮರಣ ಸಂಖ್ಯೆ ಇಳಿಮುಖವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿ 70-73 ವರ್ಷದವರೆಗಿದೆ. ಹೀಗಾಗಿ ಜನನ ನಿಯಂತ್ರಣ ಅತ್ಯವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ತಿರುಮಲಾಪುರ ರಾಜೇಗೌಡ, ಕಾರ್ಯದರ್ಶಿ ರಾಜು, ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್ ಬಾಬು ರಾವ್ , ಡಾ.ಸುಬ್ರಹ್ಮಣ್ಯ, ಡಾ.ಸುನಿಲ್ ಕುಮಾರ್, ವಿರೂಪಾಕ್ಷ, ರೊಟೇರಿಯನ್ ಗಳಾದ ಆರ್.ಆನಂದ್, ಕೆ.ಎ.ಸತ್ಯನಾರಾಯಣ, ಕಾರ್ಯದರ್ಶಿ ಐ.ಕೆ.ಪಿ ಹೆಗಡೆ, ವಿನಯ್ ಶೇಖರ್, ಅಣ್ಣಪ್ಪ , ಪ್ರಕಾಶ್ , ಅನಂತಶೆಟ್ಟಿ, ರಾಜು, ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Back to top button
error: Content is protected !!