ಕುಶಾಲನಗರ, ಜೂ 27: ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ.
ಈ ಹಿನ್ನಲೆಯಲ್ಲಿ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಬಳಿ ಇರುವ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ.
ದುಬಾರೆಗೆ ಭೇಟಿ ನೀಡುವ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ತೆರಳಬೇಕಾದರೆ ಕಾವೇರಿ ನದಿ ದಾಟಿ ತೆರಳಬೇಕಿದೆ. ನದಿಗೆ ಅಡ್ಡಲಾಗಿ ಸೇತುವೆ ಇಲ್ಲದ ಕಾರಣ ಮೋಟಾರ್ ಬೋಟ್ ಗಳನ್ನು ಅವಲಂಬಿಸಬೇಕಿದೆ. ಇದೀಗ
ಮಳೆಯ ಆರ್ಭಟಕ್ಕೆ ಕಾವೇರಿ ನದಿ ತುಂಬಿ ಹರಿಯುತ್ತಿರುವ ಕಾರಣ
ನೀರಿನ ರಭಸಕ್ಕೆ ಮೋಟಾರ್ ಬೋಟ್ ಗಳು ಕೆಟ್ಟು ಹೋಗುವ ಸಾಧ್ಯತೆ ಕಾರಣ ಅರಣ್ಯ ಇಲಾಖೆ ಬೋಟಿಂಗ್ ಸ್ಥಗೊತಗೊಳಿಸಿದೆ.
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಗುರುವಾರದಿಂದ ಪ್ರವೇಶ ನಿಷೇಧಿಸಲಾಗಿದೆ. ನೀರಿನ ಹರಿವು ತಗ್ಗುವವರೆಗೆ ಬೋಟಿಂಗ್ ನಿಷೇದ ಮುಂದುವರೆಯಲಿದೆ.
ಅರಣ್ಯ ಇಲಾಖೆಯ 4 ಮೋಟಾರು ಬೋಟ್ ಗಳ ಮೂಲಕ ಪ್ರವಾಸಿಗರನ್ನು ನದಿ ದಾಟಿಸಿ ಸಾಕಾನೆ ಶಿಬಿರಕ್ಕೆ ಕರೆದೊಯ್ದು ವಾಪಾಸು ಕರೆತರಲಾಗುತ್ತದೆ. ಇದೀಗ ಈ ಸೇವೆಯನ್ನು ನಿಲುಗಡೆಗೊಳಿಸಲಾಗಿದೆ.
ಮತ್ತೊಂದೆಡೆ ನೀರಿನ ಹರಿವು ಹೆಚ್ಚಳವಾಗಿರುವ ಕಾರಣ ನದಿಯಲ್ಲಿ ರಾಫ್ಟಿಂಗ್ ಸಾಹಸಿ ಕ್ರೀಡೆಗೆ ಬುಧವಾರದಿಂದ ಚಾಲನೆ ನೀಡಲಾಗಿದ್ದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಫ್ಟಿಂಗ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.