ಕುಶಾಲನಗರ, ಜೂ 20 : ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದು,2023-24ನೇ ಸಾಲಿನಲ್ಲಿ ರೂ.266.44 ಕೋಟಿ ವಾರ್ಷಿಕ ವಹಿವಾಟು ನಡೆಸುವ ಮೂಲಕ ರೂ.1.25 ಕೋಟಿ ನಿವ್ವಳ ಲಾಭಗಳಿಸಿ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.
ಸಂಘದ ಕಛೇರಿಯಲ್ಲಿ ನಡೆಸ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಸಾಲಿನಲ್ಲಿ ರೂ.237.78 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಪ್ರಸಕ್ತ ವರ್ಷ ರೂ.2.90 ಕೋಟಿಗಳಷ್ಡು ಹೆಚ್ಚಿನ ವಹಿವಾಟು ನಡೆಸಲಾಗಿದೆ.ಸಂಘವು ಕಳೆದ ಏಳು ವರ್ಷಗಳಿಂದಲೂ ಸತತ ಒಂದು ಕೋಟಿಗೂ ಮೀರಿದ ಲಾಭ ಗಳಿಸುತ್ತಿರುವುದು ಹೆಮ್ಮೆ ವಿಚಾರವಾಗಿದೆ ಎಂದರು.
ಸಂಘದ ಸದಸ್ಯರಿಗೆ ಶೇ.18 ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ.
ಸಂಘವು 3604 ಸದಸ್ಯರಿಂದ ರೂ.358.39 ಲಕ್ಷಗಳ ಪಾಲು ಹಣವನ್ನು ಹೊಂದಿದೆ. ಸಂಘದ ದುಡಿಯುವ ಬಂಡವಾಳ ಕಳೆದ ಸಾಲಿನಲ್ಲಿ ರೂ.6006.74 ಲಕ್ಷ ಇದ್ದು, ಈ ಸಾಲಿನಲ್ಲಿ ದುಡಿಯುವ ಬಂಡವಾಳ ರೂ.6956.43 ಲಕ್ಷ ಗಳಷ್ಟು ಕ್ರೋಡಿಕರಿಸಿದೆ. ಸಂಘದಲ್ಲಿ ರೂ.813.21 ಲಕ್ಷ ಠೇವಣಿ ಸಂಗ್ರಹಿಸಿದ್ದು,ಇದು ಸಂಘವು ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಸಂಘದ ಸದಸ್ಯರ ಅನುಕೂಲಕ್ಕಾಗಿ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಾಮೀನು ಸಾಲದ ಮಿತಿ ರೂ.4 ಲಕ್ಷ, ಮದ್ಯಮಾವಧಿ ಸಾಲ ರೂ.15 ರಿಂದ 20 ಲಕ್ಷ, ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆ,ವಾಸದ ಮನೆ ಖರೀದಿ ಸಾಲ ರೂ.50 ಲಕ್ಷ ವ್ಯಾಪಾರಾಭಿವೃದ್ಧಿ,ಕೈಗಾರಿಕೆ ಅಭಿವೃದ್ಧಿಯಂತಹ ದೀರ್ಘಾವಧಿ ಸಾಲ ರೂ.50 ಲಕ್ಷ, ವನಿತಾ ಬಂಧು ಮಹಿಳಾ ಗುಂಪು ಸಾಲ ರೂ.2.5 ಲಕ್ಷ ಹಾಗೂ ಸ್ವ ಸಹಾಯ ಗುಂಪು ಸಾಲ ರೂ.15 ಲಕ್ಷ ನೀಡಲಾಗುತ್ತಿದೆ. ಸದಸ್ಯರು ಸಾಲಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಸಂಘವು ಪ್ರಾರಂಭಿಸಿದ ವನಿತಾ ಬಂಧು ಮತ್ತು ಜನಚೈತನ್ಯ ಎಂಬ ಜಂಟಿ ಭಾದ್ಯತಾ ಗುಂಪು ಸಾಲ ಯೋಜನೆಯು ಯಶಸ್ಚಿಯಾಗಿದ್ದು,ಈ ಯೋಜನೆಯಡಿಯಲ್ಲಿ ಒಟ್ಟು 887 ಮಹಿಳೆಯರಿಗೆ ಪ್ರಸಕ್ತ ಸಾಲಿನಲ್ಲಿ ರೂ.4.63 ಕೋಟಿ ಸಾಲ ವಿತರಿಸಿದ್ದು, ವಾರ್ಷಿಕ ಅಂತ್ಯಕ್ಕೆ ರೂ.4.36 ಕೋಟಿ ಬರಲು ಬಾಕಿಯಿದ್ದು,ಈ ಸಾಲದ ಯೋಜನೆಯಿಂದ ಎಲ್ಲಾ ವರ್ಗದ ಮಹಿಳೆಯರು ಆರ್ಥಿಕ ಸಬಲತೆಯತ್ತ ಸಾಗುತ್ತಿರುವುದು ಸಂಘಕ್ಕೆ ಒಂದು ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.
ಪ್ರತಿ ಮಹಾಸಭೆಯಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ,ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ ಪದವಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಸಂಘದ ಶತಮಾನೋತ್ಸವದ ಸವಿ ನೆನಪಿಗಾಗಿ ಶತಮಾನೋತ್ಸವ ಭವನ,ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರು ಬಳಿ 120 ಸೆಂಟ್ಸ್ ನಿವೇಶನವನ್ನು 2021ರಲ್ಲಿ ಖರೀಸಿದ್ದು, ಭವನ ಹಾಗೂ ವಾಹನ ನಿಲುಗಡೆಗೆ ಒಟ್ಟು 179.25 ಸೆಂಟ್ಸ್ ನಿವೇಶನವನ್ನು ಸಂಘಕ್ಕೆ ಖರೀದಿಸಲಾಗಿದೆ ಎಂದು ತಿಳಿಸಿದರು.
ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಜೂ.23 ರಂದು ಭಾನುವಾರ ಪೂರ್ವಾಹ್ನ 11 ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು,ಸರ್ವ ಸದಸ್ಯರು ಹಾಜರಾಗುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದಕುಮಾರ್,ನಿರ್ದೇಶಕರಾದ ಪಿ.ಬಿ.ಯತೀಶ್, ಗಣೇಶ್,ನೇತ್ರಾವತಿ, ಕವಿತಾ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಉಪಸ್ಥಿತರಿದ್ದರು.
Back to top button
error: Content is protected !!