ಕುಶಾಲನಗರ ಮಾ15 : ಸೈನಿಕ ಶಾಲೆ ಕೊಡಗಿಗೆ ವಿಶೇಷ ಅತಿಥಿಯಾಗಿ ಮೇಜರ್ ಜನರಲ್ ಸಂಜೀವ್ ಡೋಗ್ರಾ, ಡೆಪ್ಯುಟಿ ಕಮಾಂಡೆಂಟ್ ಮತ್ತು ಮುಖ್ಯ ತರಬೇತುದಾರರು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್ವಾಸ್ಲಾ, ಪುಣೆ ಇವರು ಆಗಮಿಸಿ, ಶಾಲೆಯ ವಿದ್ಯಾರ್ಥಿಗಳೊಂದಿಗೆ ಪ್ರೇರಣಾತ್ಮಕ ಸಂವಾದವನ್ನು ನಡೆಸಿಕೊಟ್ಟರು. ಈ ಸಂವಾದವು ಮಕ್ಕಳ ಆಲೋಚನಾ ವಿಶ್ಲೇಷಣೆ ಮತ್ತು ಸ್ಪೂರ್ತಿದಾಯಕ ಪ್ರೇರಣೆಗೆ ಹೆಸರಾಯಿತು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ಕೆಡೆಟ್ ಸರ್ವೇಶ್ ಅವರು ಅತಿಥಿಗಳಿಗೆ ಸ್ವಾಗತ ಕೋರಿದರು. ಹಾಗೆಯೇ ಮುಖ್ಯ ಅತಿಥಿಗಳ ಕಿರು ಪರಿಚಯ ಮಾಡಿ, ಮೇಜರ್ ಜನರಲ್ ಸಂಜೀವ್ ಡೋಗ್ರಾ ಅವರ ವೃತ್ತಿಪರ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು ಮತ್ತು ಅವರ ಆರಂಭಿಕ ತರಬೇತಿ ದಿನಗಳಿಂದ ಹಿಡಿದು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿ ಎ)ಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಮತ್ತು ಮುಖ್ಯ ತರಬೇತುದಾರರಾಗಿ ನೇಮಕವಾಗುವವರೆಗಿನ ಎಲ್ಲಾ ಸಾಧನೆಗಳ ವಿವರ ನೀಡಿದರು.
ಕೆಡೆಟ್ ಸರ್ವೇಶ್ ರವರು ಮುಖ್ಯ ಅತಿಥಿಯ ಪರಿಚಯದಲ್ಲಿ ಪುಣೆಯ ಖಡಕ್ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪೋರ್ಟಲ್ಗೆ ಅಧಿಕಾರಿಯ ಪ್ರವೇಶವನ್ನು ಒಳಗೊಂಡಂತೆ, ಅಧಿಕಾರಿಯ ಸುಪ್ರಸಿದ್ಧ ವೃತ್ತಿಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದರು. ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್ ಮತ್ತು ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್, ಸಿಕಂದರಾಬಾದ್ ನಲ್ಲಿ ಸಲ್ಲಿಸಿದ ಸೇವೆಯು ಯುದ್ಧ ಅನುಭವವನ್ನು ಎದುರಿಸಲು ಮತ್ತು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್ ಸೇರಿದಂತೆ ಬಹುತೇಕ ಎಲ್ಲಾ ಕಠಿಣ ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವಿಶೇಷ ಅನುಭವ ನೀಡಿತು. ನಂತರ ಜನರಲ್ ಆಫೀಸರ್ನಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಶ್ರೀಯುತರು ಮೌಂಟೇನ್ ವಿಭಾಗದ ಕಮಾಂಡಿಂಗ್, ಇನ್ಫೆಂಟ್ರಿ ಸ್ಕೂಲ್ನಲ್ಲಿ ಡೆಪ್ಯೂಟಿ ಕಮಾಂಡೆಂಟ್ ಮತ್ತು ಮುಖ್ಯ ತರಬೇತುದಾರರಾದರು. ನಂತರ ವಾರ್ ಗೇಮಿಂಗ್ ಡೆವಲಪ್ಮೆಂಟ್ ಸೆಂಟರ್ನ ಕಮಾಂಡೆಂಟ್ ಹಾಗೂ ಪ್ರಸ್ತುತ ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್ ಡಿ ಎ)ಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಮತ್ತು ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್ ಡಿ ಎ)ಯಲ್ಲಿ ತಮ್ಮ ಆರಂಭಿಕ ದಿನಗಳ ಅನುಭವಗಳನ್ನು ಹಾಗೂ ಸಲ್ಲಿಸಿದ ಸೇವೆಯ ಚಿತ್ರಣ ನೀಡಿದರು. ಇದು ಅವರ ಸಮರ್ಪಣೆ ಮತ್ತು ಪರಿಶ್ರಮಕ್ಕೆ ಉದಾಹರಣೆಯಾಗಿದೆ. ಶಾಲೆಯಲ್ಲಿನ ಅತ್ಯಾಧುನಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಕೆಡೆಟ್ಗಳನ್ನು ಪ್ರೋತ್ಸಾಹಿಸಿದ ಅವರು, ಸಮಾಜದ ಆದರ್ಶ ವ್ಯಕ್ತಿಗಳನ್ನು ರೂಪಿಸುವಲ್ಲಿ ಶಾಲೆಯ ತರಬೇತಿ ಹಾಗೂ ಸೌಲಭ್ಯಗಳ ವ್ಯವಸ್ಥೆಯನ್ನು ಶ್ಲಾಘಿಸಿದರು. ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ಜೀವನದ ಆಕಾಂಕ್ಷೆಗಳನ್ನು ಉತ್ಸಾಹದಿಂದ ಮುಂದುವರಿಸಿ, ಆದರ್ಶ ನಾಗರೀಕರಾಗಬೇಕೆಂದು ಪ್ರೋತ್ಸಾಹಿಸಿದರು. ಇದರೊಂದಿಗೆ ಕೇಂದ್ರ ಲೋಕಸೇವಾ ಆಯೋಗದ ಎನ್ ಡಿ ಎ ಪರೀಕ್ಷೆ ಮತ್ತು ವಿವಿಧ ರಕ್ಷಣಾ ತರಬೇತಿ ಅಕಾಡೆಮಿಗಳಿಗೆ ಶಿಸ್ತುಬದ್ಧ ತಯಾರಿ ಮಾಡುವ ಕುರಿತು ಅವರು ಅಮೂಲ್ಯವಾದ ಮಾರ್ಗದರ್ಶನವನ್ನು ನೀಡಿದರು. ಇಂತಹ ಸ್ಪರ್ಧಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಸಕಾರಾತ್ಮಕ ಮನೋಭಾವ, ಕಠಿಣ ಪರಿಶ್ರಮ, ದೃಢಸಂಕಲ್ಪ, ತೆರೆದ ಮನಸ್ಸು ಮತ್ತು ಸಾಂಘಿಕ ಕಾರ್ಯಗಳ ಪ್ರಾಮುಖ್ಯತೆಯನ್ನು ಕುರಿತು ಒತ್ತಿ ಹೇಳಿದರು.
ಪ್ರಸ್ತುತ ಸಂವಾದವು ವಿದ್ಯಾರ್ಥಿಗಳಿಗೆ ರಕ್ಷಣಾ ಪಡೆಗಳಲ್ಲಿ ವೃತ್ತಿಜೀವನವನ್ನು ಹೊಂದುವ ಅಂತದೃಷ್ಠಿಗಳಿಸಲು ಮತ್ತು ಭಾರತೀಯ ಸಶಸ್ತ್ರ ಪಡೆಗಳಲ್ಲಿ ದಕ್ಷ ರಕ್ಷಣಾ ಅಧಿಕಾರಿಯಾಗಲು ಹೊಂದಬೇಕಾದ ಅಗತ್ಯ ಗುಣಗಳ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಎನ್ ಡಿ ಎಯಲ್ಲಿನ ದೈನಂದಿನ ತರಬೇತಿ, ಜೀವನ ಶೈಲಿ, ಶಿಸ್ತು ಹಾಗೂ ಅಕಾಡೆಮಿಯು ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತದೆ ಎಂದು ಮುಖ್ಯ ಅತಿಥಿಗಳಿಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ಕೊಡಗಿನ ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಮುಖ್ಯ ಅತಿಥಿಗಳಿಗೆ ಶಾಲೆಯ ಪರವಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು. ಹಾಗೆಯೇ ಸೌಹಾರ್ಧಯುತ ಭೇಟಿಯ ದ್ಯೋತಕದ ಸಂಕೇತವಾಗಿ ಮುಖ್ಯ ಅತಿಥಿಗಳಿಗೆ ಶಾಲೆಯ ಯುದ್ಧ ವೀರರ ಸ್ಮಾರಕದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಮೇಜರ್ ಜನರಲ್ ಸಂಜೀವ್ ಡೋಗ್ರಾ ಅವರ ಭೇಟಿಯು ಸೈನಿಕ ಶಾಲೆ ಕೊಡಗಿನ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕವಾಗಿದ್ದು, ನೂತನ ಅನುಭವವನ್ನು ನೀಡಿತು. ಇದರೊಂದಿಗೆ ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಿದ ನಂತರ ವೃತ್ತಿ ಜೀವನದಲ್ಲಿ ಉತ್ಕೃಷ್ಟತೆಯೊಂದಿಗೆ ಮುಂದುವರಿಯಲು ಅವರನ್ನು ಪ್ರೇರೇಪಿಸಿತು. ಪ್ರಸ್ತುತ ಸಂವಾದ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Back to top button
error: Content is protected !!