ಕುಶಾಲನಗರ, ಫೆ 08: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆ ಗಳ ಹಾವಳಿ ಮಿತಿಮೀರಿದ್ದು ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವೃದ್ದೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಗ್ರಾಮದ ರೈತ ಮಹಿಳೆ ವೆಂಕಟಮ್ಮ (65) ಎಂಬವರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವೃದ್ದೆಯ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಬೆಳಗ್ಗೆ ಕೆಲಸಕ್ಕೆ ಅಣಿಯಾಗುತ್ತಿದ್ದ ವೆಂಕಟಮ್ಮ ಅವರ ಮನೆ ಹತ್ತಿರವೇ ಕಾಡಾನೆ ದಾಳಿ ನಡೆಸಿದೆ.
ಹೆಚ್ಚಿನ ಚಿಕಿತ್ಸೆಗೆ ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಾಸುದೇವ ಮೇಟಿ ಬಣದ ಪದಾಧಿಕಾರಿಗಳು ಭೇಟಿ ನೀಡಿ ಗಾಯಾಳು ಕುಟುಂಬಸ್ಥರು ಹಾಗೂ ಸ್ಥಳೀಯ ರೈತರಿಂದ ಮಾಹಿತಿ ಪಡೆದುಕೊಂಡರು. ಕಾಡಾನೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅರೋಪಿಸಿ ಸ್ಥಳದಲ್ಲಿ ಪ್ರತಿಭಟಿಸಿ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಜೆ.ಶರತ್ ನೇತೃತ್ವದಲ್ಲಿ ಪ್ರತಿಭಟಿಸಿದ ಪದಾಧಿಕಾರಿಗಳು ಅರಣ್ಯ ಇಲಾಖೆಗೆ ಧಿಕ್ಕಾರ ಕೂಗಿದರು. ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸಮರ್ಪಕ ಯೋಜನೆ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದೆ. ಕಾಡಾನೆಗಳ ನಿಯಂತ್ರಿಸಲು ಸೋಲಾರ್ ಬೇಲಿ ಅಳವಡಿಕೆ ಹಾಗೂ ಕಂದಕಗಳ ನಿರ್ಮಾಣ ವಿಫಲವಾಗಿದೆ. ಆದ್ದರಿಂದ ರೈಲ್ವೇ ಬ್ಯಾರಿಕೆಡ್ ಗಳನ್ನು ಅಳವಡಿಸಲು ಕ್ರಮವಹಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಶರತ್ ಕುಮಾರ್, ಉಪಾಧ್ಯಕ್ಷ ಪ್ರಸನ್ನ ರೆಡ್ಡಿ, ಗೌರವಾಧ್ಯಕ್ಷ ಚಂದ್ರಣ್ಣ, ಕೊಡಗು-ಮೈಸೂರು ಜಿಲ್ಲಾ ಸಂಚಾಲಕ ಡಾ.ಅರುಣ್ ಕುಮಾರ್, ತೊರೆನೂರು ಘಟಕದ ಅಧಕ್ಷ ಅರುಣ್ ಕುಮಾರ್
ಮತ್ತಿತರರು ಒತ್ತಾಯಿಸಿದರು.
ಗ್ರಾಮದೊಳಗೆ ಅಡ್ಡಾಡುತ್ತಿರುವ ಕಾಡಾನೆಗಳು ಈ ಭಾಗದಲ್ಲಿ ಬೆಳೆದ ಕೃಷಿ ಫಸಲಾದ ಜೋಳ, ಸಿಹಿಗೆಣಸು, ಶುಂಟಿಯನ್ನು ತಿಂದು ತುಳಿದು ನಾಶಪಡಿಸುತ್ತಿವೆ. ಗ್ರಾಮಪಂಚಾಯ್ತಿ ಹಾಗೂ ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತವಾಗಿ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸೈನಿಕ ಪುಟ್ಟೇಗೌಡ, ಗ್ರಾಮಸ್ಥರಾದ ಎಚ್.ಟಿ.ನಾಗರಾಜ್, ದಿಲೀಪ್ ಮತ್ತಿತರರು ಆರೋಪಿಸಿದರು.
ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ,
ಗಾಯಾಳು ವೆಂಕಟಮ್ಮ ಅವರ ಚಿಕಿತ್ಸೆಗೆ ಅಗತ್ಯ ನೆರವು ಕಲ್ಪಿಸುವ ಭರವಸೆ ನೀಡಿದ್ದಾರೆ.
Back to top button
error: Content is protected !!