ಕುಶಾಲನಗರ, ಜ 09: ಕೊಡಗು ಜಿಪಂ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು, ಮಡಿಕೇರಿ, ಕುಶಾಲನಗರ ಪಶುವೈದ್ಯಕೀಯ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಿಸ್ತರಣಾ ಘಟಕ ಬಲಪಡಿಸುವಿಕೆ ಯೋಜನಾ ಕಾರ್ಯಕ್ರಮದಡಿ ರೈತರಿಗೆ ತರಬೇತಿ ಕಾರ್ಯಗಾರ ಕೂಡಿಗೆಯ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೊಡಗು ಜಿಲ್ಲಾ ಕುರಿ ಮತ್ತು ಉಣ್ಣೆ ನಿಗಮ ಅಧ್ಯಕ್ಷ ಡಿ.ಆರ್.ಪ್ರಭಾಕರ್ ಕಾರ್ಯಗಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹೈನುಗಾರಿಕೆಯೊಂದಿಗೆ ಕುರಿ, ಕೋಳಿ ಸಾಕಾಣಿಕೆ ಜೀವನಕ್ಕೆ ಆಧಾರವಾಗಲಿದೆ. ಪದವಿ ಪಡೆದ ಎಲ್ಲರಿಗೂ ಸರಕಾರ ಉದ್ಯೋಗ, ಕಲಿಕೆಗೆ ತಕ್ಕ ಕ್ಷೇತ್ರ ಲಭಿಸುವುದು ಕಷ್ಟಸಾಧ್ಯ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ನಡುವೆ ಎಕರೆಯಷ್ಟು ಭೂಮಿ ಹೊಂದಿರುವವನೇ ನಿಜವಾದ ಧನಿಕ ಎನಿಸಿಕೊಳ್ಳುವ ಕಾಲ ಬರಲಿದೆ. ಕುರಿ ಸಾಕಾಣಿಕೆ ಬಗ್ಗೆ ಕೀಳರಿಮೆ ತೋರದೆ ಅದರಿಂದ ಬರುವ ಆದಾಯ ಮೂಲದ ಬಗ್ಗೆ ಅರ್ಥೈಸಿಕೊಂಡಲ್ಲಿ ರೈತರು ತಮ್ಮ ಆರ್ಥಿಕ ಮಟ್ಟ ವೃದ್ದಿಸಿಕೊಳ್ಳಲು ಸಾಧ್ಯವಿದೆ ಎಂದರು. ಇಲಾಖೆ ಮೂಲಕ ಪ್ರಗತಿಪರ ಸಾಕಣಿಕೆದಾರರನ್ನು ಪ್ರವಾಸ ಕರೆದೊಯ್ದು ಹೆಚ್ಚಿನ ಮಾಹಿತಿ, ಅರಿವು ಪಡೆದುಕೊಳ್ಳಲು ಅವಕಾಶ ಕಲ್ಪಿಸಲು ಕ್ರಮವಹಿಸಬೇಕಿದೆ ಎಂದು ಕೋರಿದರು.
ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ನಿಗಮದ ನಿರ್ದೇಶಕ ಉದಯಕುಮಾರ್ ಸಿ.ಕೆ ಮಾತನಾಡಿ, ತರಬೇತಿ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಕೆ.ಆರ್.ನಗರ ತಾಲೂಕಿನ ಪಶುವೈದ್ಯ ಡಾ.ರುದ್ರೇಶ್ ರೈತರಿಗೆ ತರಬೇತಿ ನೀಡಿದರು.
ನಿಗಮದ ಕಾರ್ಯದರ್ಶಿ ಭರಮಣ್ಣ ಬೆಟಗೇರಿ, ನಿರ್ದೇಶಕರಾದ ಮಹದೇವ್, ಚಿಕ್ಕಯ್ಯ, ಪುನಿತ್, ಸಾವಿತ್ರಮ್ಮ, ಶಾಂತ ಬೆಟಗೇರಿ, ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯ ಡಾ.ನಾಗರಾಜ್, ಜರ್ಸಿ ತಳಿ ಸಖವರ್ಧನಾ ಕೇಂದ್ರದ ಡಾ.ಶ್ರೀದೇವ್, ಹಂದಿ ತಳಿ ಸಂವರ್ಧನಾ ಕೇಂದ್ರದ ಡಾ.ಕೆ.ಶೈಲಜಾ, ಕುಶಾಲನಗರ ಪಶುವೈದ್ಯಕೀಯ ಆಸ್ಪತ್ರೆಯ ಪ್ರಭಾರ ಮುಖ್ಯ ಪಶುವೈದ್ಯ ಡಾ.ಸಂಜೀವಕುಮಾರ್ ಆರ್.ಶಿಂಧೆ ಇದ್ದರು.
ತಾಲೂಕಿನಾದ್ಯಂತ 100 ಕ್ಕೂ ಅಧಿಕ ಮಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
Back to top button
error: Content is protected !!